Saturday, March 3, 2012

ಮೊದಲಬಾರಿಗೆ ತಪ್ಪು ಮಾಡುವಾಗ ಭಯವಿರುತ್ತದೆ......



     ಇದು ನನ್ನ ಅನುಭವ...... ನಾನಾಗ ಪ್ರಥಮ ಪದವಿಯಲ್ಲಿ ಓದುತ್ತಿದ್ದೆ.......ಮಿಟ್ಟರ್ಮ್ ಎಕ್ಸಾಮ್ ಮುಗಿದ ಮೇಲೆ 15 ದಿನ ರಜಾ ಇತ್ತು ಅತ್ತೆ ಮಗ ಊರಿಗೆ ಬಂದಿದ್ದ ಅವನ ಜೊತೆ  ಅತ್ತೆ ಮನೆಗೆ ಹೋಗೋಣಾ ಅಂತ ಅನ್ನಿಸ್ತು.... ಅವರು ಆ ಸಮಯದಲ್ಲಿ ಕಳಸಾಪುರದಲ್ಲಿ ಇದ್ದರು.... ಅತ್ತೆಯ ಮಗ ನನಗೆ ಸಂಬಂಧಿ ಅನ್ನೋದಕ್ಕಿಂತ ಹೆಚ್ಚಾಗಿ ಆಪ್ತ ಸ್ನೇಹಿತನಾಗಿದ್ದ..... ಎಲ್ಲಿ ಹೋಗೋದಾದ್ರೂ..... ಏನು ಮಾಡೋದಾದ್ರೂ...... ಅವನಿಗೆ ಹೇಳದೇ ಕೇಳದೇ ಮಾಡುತ್ತಿರಲಿಲ್ಲ...... ಅವನೂ ಅಷ್ಟೇ ಏನೇ ಇದ್ದರೂ ನನ್ನ ಬಳಿ ಹೇಳಿಕೊಳ್ಳಬೇಕು.... ಹೇಳಿಕೊಂಡರೇ ಅವನಿಗೆ ಸಮಾಧನ.... ಹಾಗಿತ್ತು ನಮ್ಮಿಬ್ಬರ ಸ್ನೇಹ..... ನಾನು ಶೃಂಗೇರಿಯನ್ನು ಬಿಟ್ಟು ಬೇರೆ ಊರನ್ನು ನೋಡಿದವನೇ ಅಲ್ಲ ಆದ್ದರಿಂದ ಮನೆಲೂ ಒಪ್ಪಿಗೆ ಸಿಕ್ಕಿತು ಅಮ್ಮ ಒಂದು ನಾಲ್ಕು ದಿನ ಹೋಗಿ ಬಾ ಅಂತ ಕಳಿಸಿದರು.... ಅತ್ತೆ ಮನೆ ಕ್ಯಾಂಪ್ ಏನೋ ಚೆನ್ನಾಗೇ ಇತ್ತು ನಾಲ್ಕು ದಿನ ಕಳೆದಿದ್ದು ಗೊತ್ತಾಗಲೇ ಇಲ್ಲ ನಂತ್ರ ಊರಿಗೆ ಹೊರಡಬೇಕಲ್ಲ.... ಅತ್ತೆ ಮಗನೂ ನನ್ನ ಜೊತೆ ಶೃಂಗೇರಿಗೆ ವಾಪಸ್ ಬರ್ತಿನಿ ಅಂದ.... ನನಗೂ ಅವನಿಗೂ ಒಬ್ಬರನ್ನೊಬ್ಬರು ಬಿಟ್ಟಿರುವುದು ಅಂದರೆ ಆಗುತ್ತಿರಲಿಲ್ಲ.  ನಾಳೆ ಬೆಳಿಗ್ಗೆ ತಿಂಡಿ ತಿಂದು ಹೊರಡೋಣಾ ಅಂತ ಪ್ಲಾನ್ ಮಾಡಿದ.... ನಮ್ಮಿಬ್ಬರಿಗೂ ವಿಪರೀತ  ಸಿನಿಮಾ ಹುಚ್ಚು ಇತ್ತು (ಈಗಿಲ್ಲ ಬಿಡಿ.... ಪ್ರಾಯಶಃ ಆ ವಯಸ್ಸೇ ಹಾಗಿರಬೇಕು.....) ನಾವು ಅಲ್ಲಿಂದ ಚಿಕ್ಕಮಗಳೂರಿಗೆ ಬಂದೇ ಶೃಂಗೇರಿಗೆ  ಬರಬೇಕಿತ್ತು...... ಹಾಗೇ ಚಿಕ್ಕಮಗಳೂರಿನಲ್ಲಿ ಯಾವುದಾದರೂ ಸಿನಿಮಾ ನೋಡಿಕೊಂಡು ಬರೋಣಾ ಅಂತಾನೂ ಪ್ಲಾನ್ ಇತ್ತು (ಆದ್ರೆ ಮನೆಲಿ ಹೇಳಿರಲಿಲ್ಲ ಬೈತಾರೆ ಅಂತ )....... ಅವನ ಪ್ಲಾನ್ ಪ್ರಕಾರನೇ ಬೆಳಿಗ್ಗೆ ತಿಂಡಿ ತಿಂದು ಕಳಸಾಪುರದಿಂದ ಚಿಕ್ಕಮಗಳೂರಿಗೆ ಹತ್ತು ಗಂಟೆ ಹೊತ್ತಿಗೆ ಬಂದ್ವಿ.... ಮಾರ್ನಿಂಗ್ ಷೋ ಗೆ ಸಲ್ಮನ್ ಖಾನ್, ಮಾಧುರಿ ನಟಿಸಿರುವ “ಸಾಜನ್” ಸಿನಿಮಾ ಇತ್ತು (ಟಾಕೀಸ್ ಹೆಸರುಗಳು ಮರ್ತುಹೋಗಿದೆ) ಹೋಗಿ ನೋಡಿದ್ವಿ..... ನಂತ್ರ ಮ್ಯಾಟ್ನಿ ಗೆ ತೆಲುಗು “ಭಾರತ್ ಬಂದ್”.... ತಲೇಲಿ ಸಿನಿಮಾ ನೋಡೋದು ಒಂದು ಬಿಟ್ರೆ ಶೃಂಗೇರಿ ಕಡೆ ಬಸ್ ಎಷ್ಟು ಹೊತ್ತಿಗೆ ಇದೆ ಎಂದು ತಿಳಿದುಕೊಳ್ಳುವುದನ್ನೂ ಮರೆತಿದ್ವಿ..... ಎರೆಡೂ ಸಿನಿಮಾ ಮುಗಿಸಿಕೊಂದು ಹೋಟೆಲ್ ಗೆ ಹೋಗಿ ಸರಿಯಾಗಿ ತಿಂಡಿ ತಿಂದು ಕಾಫಿ ಕುಡಿದು ಇನ್ನು ಊರಿಗೆ ಹೋಗೋಣಾ ಅಂತ ಬಸ್ ಸ್ಟ್ಯಾಂಡ್ ಕಡೆ ಬಂದು ಬಸ್ ಕೇಳಿದ್ರೆ.............  ಶೃಂಗೇರಿಗೆ ಇದ್ದ  ಲಾಸ್ಟ್ ಬಸ್ ಸಂಜೆ ಆರು ವರೆಗೆ ಹೊರಟು ಹೋಗಿತ್ತು.... ಅದು ಬಿಟ್ರೆ ಇನ್ನು ರಾತ್ರಿ ಎರೆಡುವರೆಗೆ ಮೈಸೂರು ಬಸ್ .... ಆಗಿನ್ನೂ ಗಂಟೆ 7-30 ಆಗಿತ್ತು ಅಷ್ಟೇ..... ಸುಮ್ನೆ ಸ್ವಲ್ಪ ಹೊತ್ತು ಬಸ್ ಸ್ಟ್ಯಾಂಡ್ ನಲ್ಲಿ ಕೂತ್ವಿ ಟೈಂ ಹೋಗ್ಲಿಲ್ಲ........ ಹಾಗೇ ಒಂದು ರೌಂಡ್ ಸುತ್ತಿಕೊಂಡು ಬರೋಣಾ ಅಂತ ಚಿಕ್ಕಮಗಳೂರು ನಗರ ಪ್ರದಕ್ಷಿಣೆ ಶುರು ಮಾಡಿದ್ವಿ..... ದಾರಿಯಲ್ಲಿ ಕಾಣಿಸಿದ ನಾಗಲಕ್ಷ್ಮಿ ಟಾಕೀಸ್ ನಲ್ಲಿ ಯಾವುದೋ ಕನ್ನಡ ಸಿನಿಮಾ ಹಾಕಿದ್ದ.... ಹೆಸರು ನೆನಪಿಲ್ಲ..... ಸೆಕೆಂಡ್ ಷೋ ಒಂಭತ್ತು ಗಂಟೆಗೆ ಇತ್ತು.... ಸರಿ ಹೋಗೋಣಾ ಇನ್ನೇನು ಬಸ್ ಎರಡುವರೆ ಗಂಟೆಗೆ ಅಲ್ವಾ ಅಂತ ತೀರ್ಮಾನ ಮಾಡಿಕೊಂಡು ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ಅಡ್ಡಾಡಿ ಮತ್ತೆ ಟಾಕೀಸ್ ಗೆ ಬಂದು  ಸಿನಿಮಾಗೆ ಹೋದ್ವಿ...... ಯಾವುದೋ ಕಿತ್ತು ಹೋಗಿರೋ ಸಿನಿಮಾ..... ಟೈಂ ಪಾಸ್ ಆಗ್ಬೇಕಲ್ಲಾ ಅಂತ ಕಷ್ಟಪಟ್ಟುಕೊಂಡು ಪೂರ್ತಿ ನೋಡಿದ್ವಿ..... ಅದಕ್ಕೆ ಕಾರಣವೂ ಇದೆ..... ಡಿಸೆಂಬರ್ ತಿಂಗಳು ಅಂದರೆ ಈ ಮಲ್ನಾಡ್ ನಲ್ಲಿ ಸಿಕ್ಕಾಪಟ್ಟೆ ಚಳಿ ಇರುತ್ತೆ.... ಅದ್ರಲ್ಲೂ ಚಿಕ್ಕಮಗಳೂರು ಚಳಿ ಅಂದ್ರೆ ಫೇಮಸ್ಸು..... ಚಳಿಯ ಅನುಭವ ಆಗಬೇಕಾದರೆ ಯಾವಾಗಲಾದರೂ ಒಂದುಸಲ ರಾತ್ರಿ ಚಿಕ್ಕಮಗಳೂರು ಬಸ್ ಸ್ಟ್ಯಾಂಡಿನಲ್ಲಿ ಬಸ್ ಕಾಯಬೇಕು...... ಅಲ್ಲಿ ಚಳಿಯಲ್ಲಿ ನಡುಗುವುದಕ್ಕಿಂತ ಟಾಕೀಸ್ ನಲ್ಲಿ ಬೆಚ್ಚಗ ಕೂತಿರಬಹುದು ಅನ್ನೋ ಯೋಚನೆ ಇದ್ದಿದ್ರಿಂದ ಈ ಪ್ಲಾನ್ ಮಾಡಿದ್ವಿ.....  ಸಿನಿಮಾ ನೋಡಿಕೊಂಡು ರಾತ್ರಿ ಒಂದು ಗಂಟೆಗೆ ಬಸ್ ಸ್ಟ್ಯಾಂಡ್ ಗೆ ಬಂದ್ವಿ.... ಹಾಳಾದ್ದು ಚಳಿಗೆ ಹೊಟ್ಟೆ ಎಲ್ಲ ನಡುಗುತ್ತಿತ್ತು..... ನಡುಗುತ್ತಾ ಕಲ್ಲು ಬೆಂಚ್ ಮೇಲೆ ಕೂತಿದ್ವಿ..... ಹಾಗೇ ಒಂದಷ್ಟು ಹೊತ್ತು ಹೋಯ್ತು .... ಆ ಹೊತ್ತಿಗೆ ಯಾರೋ ಹೇಳಿದ್ದು ನೆನಪಾಯ್ತು.... ಪಾನ್ ಪರಾಗ್ ತಿಂದರೆ ಮೈ ಬಿಸಿ ಆಗುತ್ತೆ ಅಂತಇಬ್ಬರೂ ಮಾತಾಡಿಕೊಂಡು ಪಾನ್ ಪರಾಗ್ ತಿನ್ನೋದು ಅಂತ ತೀರ್ಮಾನ ಮಾಡಿಕೊಂಡ್ವಿ.   ಆದರೆ ಅದರ ಬಗ್ಗೆ ಇಬ್ಬರಿಗೂ ಮಾಹಿತಿ ಇರಲಿಲ್ಲ ಅದು ಜರ್ದಾ ಅಂತ ಗೊತ್ತಿತ್ತು ಬಿಟ್ರೆ ಬೇರೇನೂ ಅದ್ರ ಬಗ್ಗೆ ಗೊತ್ತಿರಲಿಲ್ಲ..... ಹೇಗೆ ತಿನ್ನಬೇಕು ಎಷ್ಟು ತಿನ್ನಬೇಕು ಅಂತನೂ ಗೊತ್ತಿರಲಿಲ್ಲ......  ಮೊದಲ ಬಾರಿ ತಿನ್ನುವ ಪ್ರಯತ್ನ ಮಾಡಿದ್ವಿ....  ಅಂಗಡಿಗೆ ಹೋಗಿ ತರುವುದು ಯಾರು ಅನ್ನುವ ಸಮಸ್ಯೆ ಬಂತು...... ಯಾರಾದರೂ ಏನಾದರೂ ಕೇಳಿದ್ರೆ ಅನ್ನೋ ಭಯ..... ಆದ್ರೂ ಧೈರ್ಯ ಮಾಡಿ ಇಬ್ಬರೂ ಅಂಗಡಿಗೆ ಹೋಗಿ ಒಂದು ಪಾನ್ ಪರಾಗ್ ಕೊಡಿ ಅಂತ ಕೇಳಿದ್ವಿ....... ಕೂಡಲೇ ಅಂಗಡಿಯವನಿಂದ ಬಂದ ಪ್ರಶ್ನೆಗೆ ಇಬ್ಬರೂ ಬೆರಗಾದ್ವಿ..... “ಗುಟ್ಕಾನೋ ಪ್ಲೈನೋ “ ಅಂತ ಕೇಳಿದ್ದ ಅವನು....... ನಾವೆಂಥಾವರು ಅಂದ್ರೆ ಅದರಲ್ಲಿ ಎರಡು ತರಹ ಬರುತ್ತೆ ಅಂತನೂ ಗೊತ್ತಿರಲಿಲ್ಲ...... ಇಬ್ಬರೂ ಮುಖ ಮುಖ ನೋಡಿಕೊಂಡ್ವಿ..... ಏನೋ ಭಯ, ತಳಮಳ, ಅನುಮಾನ ಎಲ್ಲ ಒಮ್ಮೆಲೇ ಶುರುವಾಯಿತು..... ಗುಟ್ಕಾ ಅಂತ ಹೆಸರು ಕೇಳಿದ ಕೂಡಲೇ ಅದೇನೋ  ಭಯಂಕರ ಇರಬೇಕು ಅಂತ ಬರೀ ಪ್ಲೈನ್ ಕೊಡಿ ಅಂತ ಒಂದು ಪ್ಯಾಕ್ ತಗೊಂಡ್ವಿ...... ಅಷ್ಟು ಹೊತ್ತಿಗೆ ನಮ್ಮ ಚಳಿ ಎಲ್ಲಿ ಹೋಗಿತ್ತೋ ಗೊತ್ತಿಲ್ಲ ನಮಗರಿವಿಲ್ಲದೆ ಕಿವಿ ಎಲ್ಲ ಬಿಸಿ ಬಿಸಿ ಆಗಿ ಎದೆ ಬಡಿತ ಕೂಡಾ ಜಾಸ್ತಿ ಆಗಿತ್ತು.   ಬಂದು ಪುನಹ ಕಲ್ಲು ಬೆಂಚಿನ ಮೇಲೆ ಕೂತ್ವಿ.... ತಿನ್ನುವುದಕ್ಕೆ ಭಯ... ಏನು ಆಗುತ್ತೋ ಅಂತ..... ತಲೆ ತಿರುಗಿದರೆ....??  ವಾಂತಿ ಆದರೆ....??  ಈ ರಾತ್ರಿ ಇಬ್ಬರೇ ಏನು ಮಾಡೋದು ಅಂತ....  ಕೊನೆಗೆ ಬಸ್ ನಲ್ಲಿ ಕೂತ ಮೇಲೆ ತಿನ್ನೋಣ ಅಂತ ತೀರ್ಮಾನ ಮಾಡಿಕೊಂಡು ಪ್ಯಾಕೆಟ್ಟನ್ನು ಜೋಬಿಗೆ ಸೇರಿಸಿದ್ವಿ.... ಏನೋ ಒಂದು ಥರ ಭಯ,... ತಪ್ಪು ಮಾಡುತ್ತಿರುವೆವು ಅನ್ನೊ ಭಾವನೆ ಇವೆಲ್ಲಾ ಮನದೊಳಗೆ ಉಂಟಾಗುತ್ತಿತ್ತು..... ಆದರೂ ಒಮ್ಮೆ ಹೇಗಿರುತ್ತದೆ ನೋಡಬೇಕೆಂಬ ಚಪಲ ಕೂಡಾ ಇತ್ತು....  ಪಾನ್ ಪರಾಗ್ ಕೈ ಸೇರಿದ ಮೇಲೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.... ಗಂಟೆ ಎರಡೂವರೆ ಆಗಿ ಮೈಸೂರು ಶೃಂಗೇರಿ ಬಸ್ ಬಂದೇ ಬಿಟ್ಟಿತ್ತು....... ಕೂಡಲೇ ಬಸ್ ಏರಿ ಮೊದಲು ಬಸ್ ನಲ್ಲಿ ಪರಿಚಯದವರು ಯಾರಾದರೂ ಇದ್ದಾರಾ ಎಂದು ನೋಡಿದ್ವಿ....... ಇದ್ದರೆ ಅವರೆದುರು ಹೇಗೆ ತಿನ್ನುವುದು ಎನ್ನೋ ಅಂಜಿಕೆ..... ಪುಣ್ಯಕ್ಕೆ ಯಾರೂ ಇರಲಿಲ್ಲ..... ಬಸ್ ನಲ್ಲಿ ಕೊನೆಯ ಸಾಲಿನ ಸೀಟನ್ನು ಆರಿಸಿಕೊಂಡ್ವಿ ಯಾರಿಗೂ ಕಾಣಬಾರದು ಅಂತ.... ಕಿಟಕಿ ಪಕ್ಕನೂ ಕೂತಿದ್ದು ಆಯ್ತು ವಾಂತಿ ಆದರೆ ಅನುಕೂಲವಾಗುತ್ತೆ ಅಂತ...... ಎಲ್ಲಾ ಸಿದ್ಧತೆ ಮಾಡಿಕೊಂಡರೂ ಸಹ ಜೇಬಿನಿಂದ ಪಾನ್ ಪರಾಗ್ ತೆಗೆಯುವುದಕ್ಕೇ ಹೆದರಿಕೆ...... ಏನು ಆಗಿಬಿಡುವುದೋ ಅನ್ನೋ ಭಯ.... ಬಸ್ ನಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ .....???  ಪ್ಯಾಕ್ ಒಡೆಯುವುದಕ್ಕೆ ಕೊನೆಗೂ ಧೈರ್ಯವೇ ಬರಲಿಲ್ಲ.....  ಹಾಗೇ ಆಲ್ದೂರು ದಾಟಿತು...... ಕೊನೆಗೆ ಒಂದು ತೀರ್ಮಾನಕ್ಕೆ ಬಂದ್ವಿ ಶೃಂಗೇರಿಗೆ ಹೋದ ಮೇಲೆ ತಿನ್ನೋಣ ಅಂತ...... ಆಮೇಲೆ ಮನಸ್ಸಿಗೆ ಒಂಥರಾ ಸಮಾಧಾನ ಆಯ್ತು..... ಹಾಗೇ ಬಸ್ ನಲ್ಲಿ ಮಲಗಿಕೊಂಡು ನಿದ್ರೆ ಮಾಡಿದ್ವಿ..... ಶೃಂಗೇರಿಗೆ ಬಂದು ಮನೆಗೆ ಹೋಗುತ್ತಿರುವಾಗ ಇನ್ನು ಈ ಪ್ಯಾಕ್ ಜೋಬಿನಲ್ಲಿ ಇದ್ದರೆ ಮನೆಯಲ್ಲಿ ನೋಡಿದರೆ ಬೈಸಿಕೊಳ್ಳಬೇಕು ಅಂತ ಅನ್ನಿಸ್ತು.  ಹಾಗಾದ್ರೆ ಎಸೆದುಬಿಡೋಣಾ ಅಂತ ಮಾತಾಡಿಕೊಂಡು ಕೊನೆಗೂ.... ತಿನ್ನದೇ ಪಾನ್ ಪರಾಗ್ ಪ್ಯಾಕ್ ಅನ್ನು ಎಸೆದ್ವಿ......  ಎಸೆದ ಮೇಲೆ ಮನಸ್ಸಿಗೆ ಒಂಥರಾ ನೆಮ್ಮದಿ ಉಂಟಾಯಿತು....

     ಊರಲ್ಲಿದ್ದರೆ ಕೆಲಸ ಇರಲಿ ಇಲ್ಲದಿರಲಿ ಸಂಜೆ ಒಂದು ರೌಂಡ್ ಪೇಟೆ ಕಡೆಗೆ ಹೋಗೋ ಹವ್ಯಾಸ ಮೊದಲಿಂದ ರೂಢಿಯಾಗಿತ್ತು... ಅದೇ ಪ್ರಕಾರ ನಾನು ನನ್ನತ್ತೆ ಮಗ ಪೇಟೆಗೆ ಹೋದ್ವಿ..... ಅಲ್ಲಿ ನಮ್ಮ ಸ್ನೇಹಿತನೊಡನೆ ನಮ್ಮ ಪಾನ್ ಪರಾಗ್ ಕಥೆಯನ್ನು ಹೇಳಿಕೊಂಡ್ವಿ..... ಅವನಿಗೆ “ತೀನ್ ಸೌ” ಹಾಗೂ “ಚಾರ್ ಸೌ ಬೀಸ್” ಎಲ್ಲಾ ತಿನ್ನುವ ಅಭ್ಯಾಸ ಇತ್ತು ..... ನಮ್ಮ ಕಥೆ ಕೇಳಿ ಬಿದ್ದು ಬಿದ್ದು ನಕ್ಕು...... ನೀವು ತೆಗೆದು ಕೊಂಡಿದ್ದು “ಪಾನ್ ಪರಾಗ್ ಪ್ಲೈನ್” ಅಲ್ವೇಂಡ್ರೋ ಅಂದ..... ಹುಂ ಅಂದ್ವಿ..... ಮಂಗಗಳಾ ಅದು ಬರೀ ಅಡಿಕೆ ಪುಡಿ ಕಣ್ರೋ..... ಅದರಲ್ಲಿ ಜರ್ದಾ ಗಿರ್ದಾ ಏನೂ ಇರಲ್ಲ ಬರೀ ಅಡಿಕೆ ಅಷ್ಟೇ ಅದನ್ನ ತಿಂದರೆ ಏನೂ ಅಗ್ತಾ ಇರಲಿಲ್ಲ....  ಅಂದ.....  ನಮಗೆ ಆಗ ಒಂಥರಾ ಮರ್ಯಾದಿ ಹೋದ ಹಾಗೆ ಆಯಿತು..... ಬರೀ ಅಡಿಕೆ ಪುಡಿ ತಿನ್ನೋಕೆ ಇಷ್ಟು ಹೆದರಿಕೊಂಡ್ವಲ್ಲಾ ಅಂತ.....  ನಮ್ಮತ್ತೆ ಮಗ ಮೊನ್ನೆ ಬಂದಾಗ ಈ ಘಟನೆ ನೆನಪಿಸಿಕೊಂಡು ನಗುತ್ತಾ ನೋಡೋ ಮೊದಲನೇ ಬಾರಿ ತಪ್ಪು ಮಾಡುವಾಗ ಎಷ್ಟು ಹೆದರಿಕೆ ಇರುತ್ತದೆ ..... ಕೊನೆಗೂ ನಮಗೆ ಪಾನ್ ಪರಾಗ್ ತಿನ್ನಲು ಆಗಲಿಲ್ಲವಲ್ಲ ಅಂದೆ.

Tuesday, July 5, 2011

ಬಾರೇ.... ಬಾರೇ.... ಚೆಂದದ ಚೆಲುವಿನ ತಾರೆ.....

               ಮ್ಯಾಂಡೋಲಿನ್ ನಲ್ಲಿ ನೆಡೆಸಿದ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರಿಂದ ಸಿಕ್ಕ  ಪ್ರೋತ್ಸಾಹದಿಂದ ಸಂತೋಷವಾಗಿ ಇನ್ನೂ ಹೆಚ್ಚು ಹೆಚ್ಚು ಕಲಿಯಬೇಕೆಂಬ ಹಂಬಲ ಉಂಟಾಗಿದೆ.   ಆ ದಿನ ನಿಮಗೆ ಒಂದು ಹಾಡನ್ನು ಕೇಳಿಸುತ್ತೇನೆಂದು ಹೇಳಿದ್ದೆ.  ಇವತ್ತು ಮಧ್ಯಾಹ್ನ ಒಂದು ಹಾಡನ್ನು ನುಡಿಸಿ ಸಿಸ್ಟಂ ಗೆ ರೆಕಾರ್ಡ್ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇನೆ.  ನಾಗರ ಹಾವು ಚಿತ್ರದ ಈ ಹಾಡು ಎಲ್ಲರೂ ಕೇಳಿರುತ್ತೀರಿ.....  ಹೇಗಿದೆ ಎಂದು ತಿಳಿಸಿ...... ಸಂಗೀತ ನಿರ್ದೇಶನ ವಿಜಯ ಭಾಸ್ಕರ್ ಅವರದು... ವಿಡಿಯೋದಲ್ಲಿ ತಪ್ಪಾಗಿ ಉದಯ ಭಾಸ್ಕರ್ ಎಂದು ಟೈಪಾಗಿದೆ.. ಕ್ಷಮಿಸಿ....


Tuesday, June 28, 2011

ಭಾವ ಜೀವಿ..........

                         ಮನದೊಳಗೆ
                         ನೀ ಬರೆದ
                         ನೂರೆಂಟು ಭಾವಗಳ
                         ನಡುವಿನೊಳಗೊಂದು
                         ಶೃಂಗಾರದ
                         ಸಾಲು........
                         ನೆನಪಾಗುತಿದೆ ಗೆಳತೀ.......
                         "ಆ ನಿನ್ನ
                         ಮೃದು ಅಧರದ
                         ಸುಮಧುರ
                         ಸಿಹಿ ಚುಂಬನಾ......"
                         ಆದರೂ.....
                         ನಾ.... ಭಾವ ಜೀವಿ.....

Tuesday, June 21, 2011

ಮ್ಯಾಂಡೋಲಿನ್ ....... ಮೊದಲ ಪ್ರಯತ್ನ......

          ಮೊದಲೇ ಹೇಳಿಕೊಂಡುಬಿಡುತ್ತೇನೆ... ನಾನು ಯಾವುದೇ ರೀತಿಯ ಶಾಸ್ತ್ರೀಯ ಸಂಗೀತವನ್ನು ಕ್ರಮವಾಗಿ ಅಭ್ಯಾಸ ಮಾಡಿಲ್ಲ.   ಆದರೆ ವಾದ್ಯಗಳಲ್ಲಿ ನನಗೆ ಆಸಕ್ತಿ ಇದೆ. ಸುಮ್ಮನೆ ಹೀಗೇ ಏನಾದರೂ ನುಡಿಸುತ್ತಾ...... ಹಾಗೇ ಯಾವುದಾದರೂ ಹಾಡುಗಳನ್ನು ನುಡಿಸುವುದಕ್ಕೆ ಪ್ರಯತ್ನ ಪಡುವುದು ನನ್ನ ಹವ್ಯಾಸಗಳಲ್ಲಿ ಒಂದು.   ಕಾಲೇಜಿನ ದಿನಗಳಲ್ಲಿ ನನ್ನ ಬಳೀ ಒಂದು ಮ್ಯಾಂಡೋಲಿನ್ ಇತ್ತು.  ಅದರಲ್ಲಿ ಕೆಲವು ಹಾಡುಗಳನ್ನು ನುಡಿಸಲು ಕಲಿತು ಒಂದೆರಡು ಕಾರ್ಯಕ್ರಮಗಳನ್ನು ಕೊಟ್ಟಿದ್ದೆ.....  ಆದರೆ ಕಾಲಕ್ರಮೇಣ ಓದಿನ ಕಡೆಯಿಂದ ವೃತ್ತಿಯಕಡೆಗೆ ತಿರುಗಿ ಹವ್ಯಾಸಗಳೆಲ್ಲವೂ ಮೂಲೆ ಸೇರತೊಡಗಿದವು.   ಹಾಗೆಯೇ ನನ್ನ ಬಳಿ ಇದ್ದ ಮ್ಯಾಂಡೋಲಿನ್ ಕೂಡಾ ಹಾಳಾಗಿಹೋಯಿತು...  :(     ಈಗ ಹದಿನೈದು ವರ್ಷದ ಬಳಿಕ ಮತ್ತೆ ಮ್ಯಾಂಡೋಲಿನ್ ಅಭ್ಯಾಸ ಮಾಡುವ ಅವಕಾಶ ದೊರಕಿದೆ.  ಶಾಸ್ತ್ರೀಯವಾಗಿ ಅಭ್ಯಾಸ ಮಾಡಬೇಕೆಂಬ ಹಂಬಲವಿದ್ದರೂ ನಮ್ಮ ಊರಿನಲ್ಲಿ ಕಲಿಸಿಕೊಡುವ ಗುರುಗಳ ಅಭಾವದ ಜೊತೆಗೆ ಶಾಸ್ತ್ರೀಯವಾಗಿ ಅಭ್ಯಾಸಮಾಡಬಲ್ಲೆನೇ...?? ಎಂಬ ಗೊಂದಲವೂ ಇದೆ.   ನನ್ನ ಆಸಕ್ತಿಯನ್ನು ನೋಡಿ ಸಂಗೀತ ನಿರ್ದೇಶಕರಾದ ಶಿವಸತ್ಯ ಅವರು (ಲಕುಮಿ, ಮುತ್ತಿನ ತೋರಣ ಇನ್ನಿತರ ಧಾರಾಹಿಗಳಿಗೆ ಸಂಗೀತ ನಿರ್ದೇಶನ ಮಾಡುತ್ತಾರೆ... ನನಗೆ ಅತ್ತೆಯ ಮಗ ಆಗಬೇಕು) ಒಂದು ಮ್ಯಾಂಡೋಲಿನ್ ಅನ್ನು ಅವರ ನೆನಪಿಗಾಗಿ ತಂದುಕೊಟ್ಟರು.   ಈಗ ಅದರಲ್ಲಿ ಅಭ್ಯಾಸ ಮಾಡುತ್ತಿದ್ದೇನೆ.  

           ಏನಾದರೂ ನುಡಿಸಿ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದು ಸುಮ್ಮನೆ ನುಡಿಸಿದ ಒಂದು ರಾಗವನ್ನು ಇಲ್ಲಿ ಪೋಸ್ಟ್ ಮಾಡಿರುತ್ತೇನೆ.  ಇದು ಯಾವುದೇ ಹಾಡಲ್ಲ ಒಂದು ರಾಗದ ನೋಟ್ ಗಳನ್ನು ಸುಮ್ಮನೇ ನುಡಿಸಿರುವುದು (ತಾಳವಿಲ್ಲದೆ ಅಂದರೂ ತಪ್ಪಾಗಲಾರದು).   ಇದು ಒಂದು ಚಿಕ್ಕ ಪ್ರಯತ್ನ ಅಷ್ಟೇ....... ಮುಂದೆ ನಿಮಗೆ ಒಳ್ಳೆಯ ಹಾಡುಗಳನ್ನು ಕೇಳಿಸಲು ಪ್ರಯತ್ನಿಸುತ್ತೇನೆ.  ಈ ರಾಗದ ಜೊತೆಗೆ ಮಿತ್ರರಾದ ದಿಗ್ವಾಸ್ ಹೆಗಡೆಯವರ ಚೆಂದದ ಚಿತ್ರಗಳನ್ನು ಸೇರಿಸಿದ್ದೇನೆ.   ನಿಮ್ಮೆಲ್ಲರ ಪ್ರೋತ್ಸಾಹ ಸದಾ ದೊರಕುವುದೆಂದು ನಂಬಿದ್ದೇನೆ......



Tuesday, June 7, 2011

ಕಾಫಿ ರುಚಿ ಹೇಗಿರಬಹದು........??

          ನಮ್ಮ ನಿಜ ಜೀವನದಲ್ಲಿ ನೋಡಿದವುಗಳು, ಕೇಳಿದವುಗಳು, ಅನುಭವಿಸಿದವುಗಳು ಇತ್ಯಾದಿ..... ಅದೆಷ್ಟೋ ಘಟನೆಗಳು  ನಡೆದಿರುತ್ತವೆ.  ಆ ಕ್ಷಣದಲ್ಲಿ ಅದನ್ನು ಅನುಭವಿಸಿ ಮರೆತುಬಿಡುತ್ತೇವೆ.  ಅವೆಲ್ಲವೂ ನೆನಪಿರಬೇಕಾದರೆ ಜೀವನದ ಹಿಂದಿನ ಪುಟಗಳನ್ನು ತಿರುವಿಹಾಕುತ್ತಿರಬೇಕು.  ನಾನು ಕೇಳಿದ ಇನ್ನೊಂದು ನಡೆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ.

          ಸುಮಾರು ಇಪ್ಪತ್ತೈದು ವರ್ಷಕ್ಕಿಂತ ಹಿಂದೆ ನೆಡೆದಿದ್ದು .....   ಮಲೆನಾಡು ಅಂದರೆ ನೀರಿನ ಪ್ರವಾಹ.... ಕರೆಂಟಿಗೆ ಅಭಾವ....  ಈ ಕರೆಂಟು ಇಲ್ಲ ಅಂದ್ರೆ ಏನೇನು ಅವಾಂತರಗಳು ಆಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದ್ದಿದ್ದೇ....  ಬೆಳಿಗ್ಗೆ ಕೋಳಿ ಕೋ.... ಅನ್ನೋದ್ರ ಒಳಗೆ ಎದ್ರೂ ಮನೆಕೆಲಸ ಮುಗಿಸಿಕೊಂಡು ಕೆಲಸಕ್ಕೆ ಹೋಗುವ ಗಂಡಸರು, ಶಾಲೆಗೆ ಹೋಗುವ ಹುಡುಗರು ಇತ್ಯಾದಿ ಎಲ್ಲರ ಮನೆಯಲ್ಲಿ ಇದ್ರೂ......... ಹಳ್ಳಿಗಳಿಂದ ಕಛೇರಿಗೆ, ಶಾಲೆಗಳಿಗೆ ನಡೆದು ಹೋಗುವುದಕ್ಕೇ (ಇಪ್ಪತ್ತೈದು ವರ್ಷಗಳ ಹಿಂದೆ) ಕೆಲವು ಸಮಯ ಹಿಡಿಯುತ್ತಿತ್ತು.  ಅದಕ್ಕೆ ಸರಿಯಾಗಿ ಏಳುವ ಹೊತ್ತಿಗೆ ಕರೆಂಟ್ ಬೇರೆ ಇಲ್ಲ ಅಂದ್ರೆ ಎಲ್ಲ ಕೆಲಸಗಳೂ ಎಡವಟ್ಟೇ....  ಹೀಗೇ ಎಡವಟ್ಟಾದ ಒಂದು ಘಟನೆ ಇವತ್ತು ಜ್ಞಾಪಕಕ್ಕೆ ಬಂತು......

          ಮುರಾರಿ ಭಟ್ಟರು ಅಂತ ಒಬ್ಬರು ಮೇಷ್ಟ್ರು  ಇದ್ರು.   ಅವರ ಹೆಂಡತಿ ಪದ್ಮ ಅಂತ.  ಈ ದಂಪತಿಗಳಿಗೆ ಒಂದೈದಾರುಜನ ಮಕ್ಕಳು.  ಭಟ್ಟರು ಪ್ರೈಮರಿ ಶಾಲೆಯಲ್ಲಿ ಮೇಷ್ಟ್ರಾಗಿದ್ರು.  ಹಳ್ಳಿಯಲ್ಲಿ ವಾಸ.  ಅಲ್ಲಿಂದ ಶೃಂಗೇರಿಗೆ (೨ ಕಿ.ಮೀ) ನಡೆದು ಹೋಗಿ ನಂತರ ಬಸ್ ನಲ್ಲಿ ಹೋಗಿ, ಬಸ್ ಇಳಿದು ಶಾಲೆಯವರೆಗೆ ನಡೆದು ಹೋಗಬೇಕಿತ್ತು.  ಹಾಗಾಗಿ ಭಟ್ಟರು ಮುಂಚಿತವಾಗಿ ಎದ್ದು, ಕಾಫಿ ಕುಡಿದು (ಬೆಳಗಿನ ಮೊದಲ ಕಾಫಿ ಮೇಷ್ಟ್ರೇ ಮಾಡಿಕೊಳ್ಳುತ್ತಿದ್ದರು), ಹಂಡೆನೀರಿಗೆ ಬೆಂಕಿಹಾಕಿ, ಹೂವು ಕೊಯ್ದುಕೊಂಡು ಸ್ನಾನ ಸಂಧ್ಯಾವಂದನೆ ದೇವರಪೂಜೆ ಇತ್ಯಾದಿಗಳನ್ನು ಪೂರೈಸಿಕೊಂಡು ಹೊರಡುವ ಹೊತ್ತಿಗೆ ಉಸಿರು ಸಿಕ್ಕಿಹಾಕಿಕೊಳ್ಳುವುದೊಂದೇ ಬಾಕಿ.  ಪ್ರತಿ ತಿಂಗಳ ಆ ಮೂರು ದಿನಗಳಲ್ಲಂತೂ ಇನ್ನೂ ಫಜೀತಿ. 

          ಒಂದು ದಿನ ಬೆಳಿಗ್ಗೆ ಎದ್ದ ಮೇಷ್ಟ್ರು ಸ್ವಿಚ್ ಹಾಕಿದ್ರೆ ಕರೆಂಟ್ ಇರಲಿಲ್ಲ....... ಹಾಗೇ ಗೊಣಗಿಕೊಳ್ಳುತ್ತಾ ಚಿಮಣಿ ಹಚ್ಚಿಕೊಂಡು ಬಚ್ಚಲಿಗೆ ಹೋಗಿ ಮುಖ ತೊಳೆದುಕೊಂಡು, ಅಡಿಗೆ ಒಲೆ ಹಚ್ಚಿ (ಆಗಿನ್ನೂ ಹಳ್ಳಿಗಳಲ್ಲಿ ಸ್ಟೌ ಗಳ ಬಳಕೆ ಬಂದಿರಲಿಲ್ಲ), ಕಾಫಿಗೆ ನೀರಿಟ್ಟು, ಬೆಲ್ಲ ಹಾಕಿ, ಕಾಫಿ ಸೋಸುವ ಬಟ್ಟೆಗಾಗಿ (ಹಿಂದೆ ಕಾಫಿಯನ್ನು ಬಟ್ಟೆಯಲ್ಲಿ ಸೋಸುತ್ತಿದ್ದರು ಈಚೆಗೆ ಫಿಲ್ಟರ್ ಗಳು ಬಂದಿವೆ) ಹುಡುಕಾಡಿದರು ಮಾಮೂಲಿ ಇರುವ ಜಾಗದಲ್ಲಿ ಕಾಣಲಿಲ್ಲವಾದ್ದರಿಂದ...  " ಲೇ ಪದ್ದಿ ಕಾಫಿ ಸೋಸೋ ಬಟ್ಟೆ ಎಲ್ಲೇ......?? " ಎಂದು ಹೆಂಡತಿಯನ್ನು ಕೇಳಿದ್ರು.  ಆಕೆ ಪಾಪ ನಿದ್ದೆಗಣ್ಣಲ್ಲೇ...  "ನಿನ್ನೆ ಸಾಯಂಕಾಲ ಹಿಂಡಿ ಬಚ್ಚಲಮನೆ ಗಳದ ಮೇಲೆ ಹರವಿದಿನಿ ಅಂತ ಕಾಣುತ್ತೆ.... ಸ್ವಲ್ಪ ನೋಡ್ಬಾರ್ದೇಂಡ್ರೀ...." ಅಂದ್ರು.  ಸರಿ ಮೇಷ್ಟ್ರು ಚಿಮಣಿ ಹಿಡಿದುಕೊಂಡು ಹೋಗಿ ಬಚ್ಚಲಮನೆ ಗಳದ ಮೇಲೆ ಇರುವ ಬಟ್ಟೆಯನ್ನು ತಂದು ಕಾಫಿ ಸೋಸಿ ಕುಡಿದು ಮುಂದಿನ ಕೆಲಸಗಳಲ್ಲಿ ತೊಡಗಿದರು.  ಒಂದು ರೌಂಡ್ ಕಲಸಗಳನ್ನು ಮುಗಿಸಿಕೊಂಡು ಮೇಷ್ಟ್ರು ಸ್ನಾನಕ್ಕೆ ಹೋದರು.  ಆ ವೇಳೆಗಾಗಲೇ ಮೇಷ್ಟ್ರ ಹೆಂಡತಿ ಎದ್ದು ಮಕ್ಕಳಿಗೆ ಕಾಫಿ ಮಾಡುವ ಕೆಲಸದಲ್ಲಿ ತೊಡಗಿದ್ದರು.  ಸ್ನಾನ ಮುಗಿಸಿ ಮೈ ವರೆಸಿಕೊಂಡ ಮೇಷ್ಟ್ರು " ಲೇ ಪದ್ದಿ ನಿನ್ನೆ ಸ್ನಾನ ಮಾಡಿ ಗಳದ ಮೇಲೆ ಹರವಿದ ನನ್ನ ಕೌಪೀನ (ಕಚ್ಚೆ) ಎಲ್ಲಿ ಹೋಯ್ತೇ...?? ಕಾಣ್ತಾನೇ ಇಲ್ಲ...!! ... "  ಅಂತ ಕೂಗಿಕೊಂಡರು.   " ಅಲ್ಲೇ ಇರಬೇಕಲ್ರೀ....... ನಾನ್ಯಾಕ್ ತಗೋತಿನಿ ಅದನ್ನ..?? " ಅಂತ ಅಡಿಗೆ ಮನೆಯಿಂದಲೇ ಕೂಗಿಕೊಂಡ್ರು.  ಮೇಷ್ಟ್ರು ಹಾಗೇ ಏನೇನೋ ಗೊಣಗಿಕೊಳ್ಳುತ್ತಾ ಅಡಿಗೆ ಮನೆಗೆ ಬರುವ ಹೊತ್ತಿಗೆ ಸರಿಯಾಗಿ ಅವರ ಹೆಂಡತಿ.......  " ಅಲ್ರೀ..... ಕಾಫಿ ಸೋಸೋ ಅರಿವೆ ಇಲ್ಲೇ ಕೆಳಗೆ ಬಿದ್ದಿದೆ...!!  ನೀವು ಯಾವುದ್ರಲ್ಲಿ ಕಾಫಿ ಸೋಸಿದ್ರಿ....??? "

Monday, June 6, 2011

ಮರೆವು......

          ಈ ಮಳೆಗಾಲ ಶುರುವಾಯ್ತು ಅಂದ್ರೆ ಮಲೆನಾಡಿನ ಮನೆಗಳಲ್ಲಿ ಬೆಚ್ಚಗೆ ಕೂತು ಹಲಸಿನ ಹಪ್ಪಳ, ಹಲಸಿನ ಹಣ್ಣಿನ ದೋಸೆ, ಹಲಸಿನ ಹಣ್ಣಿನ ಮೂಳ್ಕ, ಪತ್ರಡೆ (ಪತ್ರವಡೆ) ಇತ್ಯಾದಿ ಒಂದೊಂದೇ ತಿಂಡಿಗಳನ್ನು ಮಾಡಿಕೊಂಡು ಬೆಚ್ಚಗೆ ಕೂತು ಬಿಸಿ ಬಿಸಿಯಾಗಿ ತಿನ್ನುವುದು ರೂಢಿಯಾಗಿಬಿಟ್ಟಿದೆ.  ಒಂದು ಕಡೆ ವಾತಾವರಣ ಬದಲಾದರೆ ಇನ್ನೊಂದು ಕಡೆ ತಿನ್ನುವ ಆಹಾರ ಪದಾರ್ಥಗಳಲ್ಲೂ ಬದಲಾವಣೆ.... ಪರಿಣಾಮ ...... ಅನಾರೋಗ್ಯ ಎಂದು ಎಲ್ಲರಿಗೂ ಗೊತ್ತು. 
          
          ಇಂದು ಒಂದೇ ಸಮನೆ ಎಡೆ ಬಿಡದೆ ಸುರಿಯುತ್ತಿರುವ ಮಳೆಯನ್ನು ನೋಡುತ್ತಿರುವಾಗ ಮೇಲೆ ಹೇಳಿದ ತಿಂಡಿಗಳು ನೆನಪಿಗೆ ಬಂದು ಬಾಯಲ್ಲಿ ನೀರು ಬಂತು.... ಪತ್ರಡೆ ನೆನಪಾದೊಡನೆ ನಮ್ಮೂರಲ್ಲಿ ನೆಡೆದ ಒಂದು ಘಟನೆಯೂ ನೆನಪಾಯಿತು.  ಸ್ವಾರಸ್ಯಕರವಾಗಿರುವುದರಿಂದ ನಿಮ್ಮೊಡನೆ ಹಂಚಿಕೊಳ್ಳಲು ಇಲ್ಲಿ ಬರೆಯುತ್ತಿದ್ದೇನೆ.

          ಸಾಧಾರಣ ಹತ್ತು ಹನ್ನೆರಡು ವರ್ಷಗಳ ಕೆಳಗೆ ನಡೆದ ಘಟನೆ ಇದು......  ಮಳೆಗಾಲದಲ್ಲಿ ನಮ್ಮೂರಿನ ಕೂಲಿ ಕೆಲಸಗಾರನೊಬ್ಬನಿಗೆ ಅನಾರೋಗ್ಯ ಉಂಟಾಯಿತು.  ಒಂದೆರಡು ದಿನ ಮನೆ ಮದ್ದು, ಕಷಾಯ ಇತ್ಯಾದಿಗಳನ್ನು ತೆಗೆದುಕೊಂರೂ ಕಡಿಮೆಯಾಗದಿದ್ದಾಗ ಆತ ವೈದ್ಯರ ಬಳಿಗೆ ಹೋದ.  ಒಂದೇ ಊರಿನವರಾದ ವೈದ್ಯರಿಗೂ ಕೂಲಿಯವನಿಗೂ ಪರಸ್ಪರ ಪರಿಚಯ ವಿದ್ದಿದ್ದರಿಂದ ಕುಶಲ ಪ್ರಶ್ನೆಗಳನ್ನು ಮಾಡಿದ ಬಳಿಕ ಏನಾಗಿದೆ ಎಂದು  ಕೇಳಿದರು...  ಕೂಲಿಯವನು ತನ್ನ ರೋಗವನ್ನು ಹೇಳಿಕೊಂಡ ಬಳಿಕ ವೈದ್ಯರು ಅವನಿಗೆ ಇನ್ನೆರಡು ದಿನದಲ್ಲಿ ಮಲ ಪರೀಕ್ಷೆಯಾಗಬೇಕೆಂದೂ ಪರೀಕ್ಷೆಗಾಗಿ  ಮಲವನ್ನು ತರಬೇಕೆಂದು ಹೇಳಿದರು.  ನಂತರ ಕೂಲಿಯವನು ಹೊರಡುವಾಗ ವೈದ್ಯರು ಅವನನ್ನು ಕರೆದು ಎಲ್ಲಾದರೂ ಸ್ವಲ್ಪ ಪತ್ರಡೆ ಸಪ್ಪು (ಮರಗೆಸು) ಸಿಕ್ಕಿದರೆ ತೆಗೆದುಕೊಂಡುಬಾ ಪತ್ರಡೆ ತಿನ್ನದೇ ಬಹಳ ವರ್ಷಗಳಾದವು ಎಂದರು.  ಆಯ್ತು ಡಾಕ್ಟ್ರೇ ಎಂದು ಹೋದವನು ಎರಡು ದಿನಗಳ ನಂತರ ಒಂದು ಕಾಯಿಸಿದ ಬಾಳೆಯಲೆಯಲ್ಲಿ ಮಲವನ್ನು ಪಟ್ಟಣ ಕಟ್ಟಿಕೊಂಡು ವೈದ್ಯರ ಬಳಿಗೆ ಬಂದನು.  ಇವನು ರೋಗಿ ಎನ್ನುವುದು ವೈದ್ಯರಿಗೆ ಮರೆತು ಹೋಗಿ ಪತ್ರಡೆ ಸೊಪ್ಪಿನ ನೆನಪು ಮಾತ್ರ ಉಳಿದಿತ್ತು.  ಚೀಲದಿಂದ ಮಲದ ಪಟ್ಟಣವನ್ನು ತೆಗೆಯಲು ಹೊರಟ ಅವನನ್ನು ವೈದ್ಯರು ತಡೆದು (ಪತ್ರಡೆ ಸೊಪ್ಪು ತೆಗೆಯುತ್ತಿರಬಹುದೆಂದು ಭಾವಿಸಿ) ಇಲ್ಲಿ ಕೊಡಬೇಡ ಮನೆಗೆ ಹೋಗಿ ನನ್ನ ಹೆಂಡತಿಯ ಹತ್ತಿರ ಕೊಟ್ಟುಹೋಗು ಅಂದರು.   ಕೂಲಿಯವನು ವೈದ್ಯರು ಮಲವನ್ನು ಮನೆಯಲ್ಲಿ ಪರೀಕ್ಷೆ ಮಾಡಬಹುದೆಂದು ಭಾವಿಸಿ ಅವರ ಮನೆಗೆ ಹೋಗಿ ವೈದ್ಯರ ಹೆಂಡತಿಯ ಹತ್ತಿರ "ಡಾಕ್ಟ್ರು ಇದನ್ನ ನಿಮ್ಗೆ ಕೊಡಕ್ಕೆ ಹೇಳಿದಾರೆ" ಅಂತ ಕೊಟ್ಟು ಹೋದನು.  ಸರಿ ಎಂದು ಅದನ್ನು ತೆಗೆದುಕೊಂಡಾಕೆ ಬಾಗಿಲು ಹಾಕಿಕೊಂಡು ಒಳಕ್ಕೆ ಹೋದಳು......... ಪಟ್ಟಣವನ್ನು ಬಿಚ್ಚಿ ನೋಡಿದಾಗ.........  

          ಮುಂದೆ ವೈದ್ಯರ ಪರಿಸ್ಥಿತಿ ಏನಾಗಿರಬಹುದೆಂದು ನೀವೇ ಊಹಿಸಿ.....   :)

Saturday, June 4, 2011

ದಿಂಡಿನ ಹಣ್ಣಿನ ಚಟ್ನಿ

     ಇನ್ನೊಂದು ಅತಿ ಸುಲಭದ ಅಡಿಗೆ ಅತ್ಯಂತ ರುಚಿಯಾಗಿದ್ದು..... ಅದೇನೆಂದ್ರೆ ದಿಂಡಿನ ಹಣ್ಣಿನ ಚಟ್ನಿ....  ದಿಂಡಿನ ಹಣ್ಣು ಅಂದ್ರೆ ಏನೆಂದು ಮೊದಲು ಹೇಳಬೇಕು.  ಇದು ಮಾವಿನ ಹಣ್ಣಿನಲ್ಲೇ ಒಂದು ವಿಧ... ಈ ಹಣ್ಣು ತಿನ್ನಲು ಬರುವುದಿಲ್ಲ ಏಕೆಂದರೆ ಬರೀ ಹುಚ್ಚಟ್ಟೆ ಹುಳಿ.   ಆದರೆ ಇದರ ಮಿಡಿಯನ್ನು ಉಪ್ಪಿನಕಾಯಿ ಹಾಕಲು ಉಪಯೋಗಿಸುತ್ತಾರೆ.  ಉಪ್ಪಿನ ಕಾಯಿಗೆ ಕುಯ್ದು ಉಳಿದ ಮಿಡಿಗಳು ಮರದಲ್ಲಿ ಹಣ್ಣಾಗಿ ಕೆಳಗೆ ಬೀಳುತ್ತವೆ.   ಈ ಹಣ್ಣುಗಳನ್ನು ತಂದು ಸಿಪ್ಪೆ ತೆಗೆದು ಚೆನ್ನಾಗಿ ಹಿಂಡಿ ರಸ ತೆಗೆಯಬೇಕು.  ಒಳ್ಳೇ ಜಾತಿಯ ಹಣ್ಣಾದರೆ ಒಂದು ಹಣ್ಣಿನಲ್ಲಿ ಒಂದು ಲೋಟದಷ್ಟು ರಸ ಬರುತ್ತದೆ.  ಮಲೆನಾಡಿನಲ್ಲಿ ಈ ರಸವನ್ನು ಸಂಗ್ರಹಿಸಿ ಮಳೆಗಾಲದಲ್ಲಿ ಅಡಿಗೆ ಮಾಡಲು ಉಪಯೋಗಿಸುತ್ತಾರೆ.  ಸಾಧಾರಣವಾಗಿ ಇಪ್ಪತ್ತು ಮೂವತ್ತು ಹಣ್ಣುಗಳನ್ನು ಹಿಂಡಿ ರಸವನ್ನು ತೆಗೆದಿಟ್ಟುಕೊಂಡರೆ ವರ್ಷವಿಡೀ ಸಾಕಾಗುತ್ತದೆ.  ಹಣ್ಣಿನ ರಸವು ಕೆಡದಂತೆ ಇಡಲು ಉಪ್ಪನ್ನು ಹಾಕುತ್ತಾರೆ.

     ದಿಂಡಿನ ಹಣ್ಣಿನ ಚಟ್ನಿ ಅಂದರೆ ಮಾಮೂಲಿ ಚಟ್ನಿಯಂತೆ ಕಡ್ಲೆಬೇಳೆ, ಉದ್ದಿನ ಬೇಳೆ ಹುರಿದುಕೊಳ್ಳುವುದು ಬೇಡ.  ಬರೀ ಹಸಿಮೆಣಸನ್ನು ಹುರಿದುಕೊಂಡು  ತೆಂಗಿನಕಾಯಿಯ ಜೊತೆಗೆ ಮಿಕ್ಸಿ ಮಾಡುವುದು ಚಟ್ನಿಗೆ ಹುಣಸೇ ಹಣ್ಣು ಹಾಕುವ ಬದಲಿಗೆ ಈ ಹಣ್ಣಿನ ರಸವನ್ನು ಹಾಕಬೇಕು (ತಿರುವಿದ ನಂತರ ಅಥವಾ ತಿರುವುವ ಹೊತ್ತಿಗೆ).  ಚಟ್ನಿಗೆ ಮಾಮೂಲಿಗಿಂತ ಒಂಚೂರು ಉಪ್ಪನ್ನು ಕಮ್ಮಿ ಹಾಕಬೇಕು, ಏಕೆಂದರೆ ದಿಂಡಿನ ರಸಕ್ಕೆ ಉಪ್ಪನ್ನು ಹಾಕಿರುತ್ತಾರೆ.  ಅಷ್ಟೇ,... ಇನ್ನುಳಿದಿದ್ದು ಒಗ್ಗರಣೆ, ಒಗ್ಗರಣೆ ಜೊತೆ ಪರಿಮಳಕ್ಕೆ ಬೇಕಾದರೆ ಇಂಗು ಹಾಗೂ ಒಂದೆರಡುಕಾಳು ಮೆಂತ್ಯ ಹಾಕಬಹುದು.  ಚಟ್ನಿ ಸಿದ್ಧವಾಯಿತು... ಅನ್ನವನ್ನು ಮಾಮೂಲಿಗಿಂತ ಸ್ವಲ್ಪ ಜಾಸ್ತಿ ಮಾಡಬೇಕು ಅಷ್ಟೇ.....  :)

     ತೆಂಗಿನ ಕಾಯಿ ಉಪಯೋಗಿಸಲು ಇಷ್ಟವಿಲ್ಲದವರು ಬರೀ ಮೆಣಸಿನ ಕಾಯಿಯನ್ನು ಹುರಿದುಕೊಂಡು ತಿರುವಿ ದಿಂಡಿನ ರಸದೊಂದಿಗೆ ಬೆರಸಿಕೊಂಡು ಒಗ್ಗರಣೆ ಹಾಕಿದರೆ ಎಷ್ಟುದಿನ ಬೇಕಾದರೂ ಇಡಬಹುದು ಇದೂ ಕೂಡಾ ಅತ್ಯಂತ ರುಚಿಯಾಗಿರುತ್ತದೆ.