Showing posts with label ಅಡಿಗೆ. Show all posts
Showing posts with label ಅಡಿಗೆ. Show all posts

Saturday, June 4, 2011

ದಿಂಡಿನ ಹಣ್ಣಿನ ಚಟ್ನಿ

     ಇನ್ನೊಂದು ಅತಿ ಸುಲಭದ ಅಡಿಗೆ ಅತ್ಯಂತ ರುಚಿಯಾಗಿದ್ದು..... ಅದೇನೆಂದ್ರೆ ದಿಂಡಿನ ಹಣ್ಣಿನ ಚಟ್ನಿ....  ದಿಂಡಿನ ಹಣ್ಣು ಅಂದ್ರೆ ಏನೆಂದು ಮೊದಲು ಹೇಳಬೇಕು.  ಇದು ಮಾವಿನ ಹಣ್ಣಿನಲ್ಲೇ ಒಂದು ವಿಧ... ಈ ಹಣ್ಣು ತಿನ್ನಲು ಬರುವುದಿಲ್ಲ ಏಕೆಂದರೆ ಬರೀ ಹುಚ್ಚಟ್ಟೆ ಹುಳಿ.   ಆದರೆ ಇದರ ಮಿಡಿಯನ್ನು ಉಪ್ಪಿನಕಾಯಿ ಹಾಕಲು ಉಪಯೋಗಿಸುತ್ತಾರೆ.  ಉಪ್ಪಿನ ಕಾಯಿಗೆ ಕುಯ್ದು ಉಳಿದ ಮಿಡಿಗಳು ಮರದಲ್ಲಿ ಹಣ್ಣಾಗಿ ಕೆಳಗೆ ಬೀಳುತ್ತವೆ.   ಈ ಹಣ್ಣುಗಳನ್ನು ತಂದು ಸಿಪ್ಪೆ ತೆಗೆದು ಚೆನ್ನಾಗಿ ಹಿಂಡಿ ರಸ ತೆಗೆಯಬೇಕು.  ಒಳ್ಳೇ ಜಾತಿಯ ಹಣ್ಣಾದರೆ ಒಂದು ಹಣ್ಣಿನಲ್ಲಿ ಒಂದು ಲೋಟದಷ್ಟು ರಸ ಬರುತ್ತದೆ.  ಮಲೆನಾಡಿನಲ್ಲಿ ಈ ರಸವನ್ನು ಸಂಗ್ರಹಿಸಿ ಮಳೆಗಾಲದಲ್ಲಿ ಅಡಿಗೆ ಮಾಡಲು ಉಪಯೋಗಿಸುತ್ತಾರೆ.  ಸಾಧಾರಣವಾಗಿ ಇಪ್ಪತ್ತು ಮೂವತ್ತು ಹಣ್ಣುಗಳನ್ನು ಹಿಂಡಿ ರಸವನ್ನು ತೆಗೆದಿಟ್ಟುಕೊಂಡರೆ ವರ್ಷವಿಡೀ ಸಾಕಾಗುತ್ತದೆ.  ಹಣ್ಣಿನ ರಸವು ಕೆಡದಂತೆ ಇಡಲು ಉಪ್ಪನ್ನು ಹಾಕುತ್ತಾರೆ.

     ದಿಂಡಿನ ಹಣ್ಣಿನ ಚಟ್ನಿ ಅಂದರೆ ಮಾಮೂಲಿ ಚಟ್ನಿಯಂತೆ ಕಡ್ಲೆಬೇಳೆ, ಉದ್ದಿನ ಬೇಳೆ ಹುರಿದುಕೊಳ್ಳುವುದು ಬೇಡ.  ಬರೀ ಹಸಿಮೆಣಸನ್ನು ಹುರಿದುಕೊಂಡು  ತೆಂಗಿನಕಾಯಿಯ ಜೊತೆಗೆ ಮಿಕ್ಸಿ ಮಾಡುವುದು ಚಟ್ನಿಗೆ ಹುಣಸೇ ಹಣ್ಣು ಹಾಕುವ ಬದಲಿಗೆ ಈ ಹಣ್ಣಿನ ರಸವನ್ನು ಹಾಕಬೇಕು (ತಿರುವಿದ ನಂತರ ಅಥವಾ ತಿರುವುವ ಹೊತ್ತಿಗೆ).  ಚಟ್ನಿಗೆ ಮಾಮೂಲಿಗಿಂತ ಒಂಚೂರು ಉಪ್ಪನ್ನು ಕಮ್ಮಿ ಹಾಕಬೇಕು, ಏಕೆಂದರೆ ದಿಂಡಿನ ರಸಕ್ಕೆ ಉಪ್ಪನ್ನು ಹಾಕಿರುತ್ತಾರೆ.  ಅಷ್ಟೇ,... ಇನ್ನುಳಿದಿದ್ದು ಒಗ್ಗರಣೆ, ಒಗ್ಗರಣೆ ಜೊತೆ ಪರಿಮಳಕ್ಕೆ ಬೇಕಾದರೆ ಇಂಗು ಹಾಗೂ ಒಂದೆರಡುಕಾಳು ಮೆಂತ್ಯ ಹಾಕಬಹುದು.  ಚಟ್ನಿ ಸಿದ್ಧವಾಯಿತು... ಅನ್ನವನ್ನು ಮಾಮೂಲಿಗಿಂತ ಸ್ವಲ್ಪ ಜಾಸ್ತಿ ಮಾಡಬೇಕು ಅಷ್ಟೇ.....  :)

     ತೆಂಗಿನ ಕಾಯಿ ಉಪಯೋಗಿಸಲು ಇಷ್ಟವಿಲ್ಲದವರು ಬರೀ ಮೆಣಸಿನ ಕಾಯಿಯನ್ನು ಹುರಿದುಕೊಂಡು ತಿರುವಿ ದಿಂಡಿನ ರಸದೊಂದಿಗೆ ಬೆರಸಿಕೊಂಡು ಒಗ್ಗರಣೆ ಹಾಕಿದರೆ ಎಷ್ಟುದಿನ ಬೇಕಾದರೂ ಇಡಬಹುದು ಇದೂ ಕೂಡಾ ಅತ್ಯಂತ ರುಚಿಯಾಗಿರುತ್ತದೆ.

Monday, May 30, 2011

ಮಾವಿನ ಹಣ್ಣಿನ ಸಾಸುವೆ......

     ಇತ್ತೀಚೆಗೆ ಮನೆಯಲ್ಲಿ ಸ್ವಯಂಪಾಕ ಮಾಡುವುದು ಜಾಸ್ತಿ ಆಗಿಬಿಟ್ಟಿದೆ......    ಸಾಧಾರಣವಾಗಿ ಎಲ್ಲ ಅಡಿಗೆಯನ್ನೂ ಮಾಡಲು ಕಲಿತುಬಿಟ್ಟಿದ್ದೇನೆ.  ಮೊನ್ನೆ  ಮನೆಯಲ್ಲಿ ಯಾರೂ ಇರಲಿಲ್ಲ ನಾನೇ ಅಡಿಗೆ ಮಾಡಬೇಕಾಯಿತು ಏನು ಮಾಡಲಿ ಎಂದು ಯೋಚಿಸುತ್ತಿರುವಾಗ ಪಕ್ಕದ ಮನೆ ಹುಡುಗ ತಂದು ಕೊಟ್ಟ ಮಾವಿನ ಹಣ್ಣು (ಕಾಡುಮಾವು) ಕಣ್ಣಿಗೆ ಬಿತ್ತು. (ಮಾವಿನ ಹಣ್ಣಿನ ಕಾಲವಾದ್ದರಿಂದ ಹೇರಳವಾಗಿ ಸಿಕ್ಕುತ್ತದೆ.)  ಸರಿ ಸಾಸುವೆ ಮಾಡೋಣ ಅಂತ ತೀರ್ಮಾನ ಮಾಡಿಕೊಂಡೆ.  ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಅತ್ಯಂತ ರುಚಿಯಾದ ಅಡಿಗೆ ಅದು.  ಮಾಡುವ ಕ್ರಮವನ್ನು ಬರೆಯಬೇಕೆನೆಸಿ ಇಲ್ಲಿ ಬರೆಯುತ್ತಿದ್ದೇನೆ.... ನಿಮಗೆ ಎಂದಾದರೂ ಉಪಯೋಗಕ್ಕೆ ಬರಬಹುದು...  :)

     ಮೊದಲು ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ನಂತರ ಹಣ್ಣಿನ ಸಿಪ್ಪೆಯನ್ನು ತೆಗೆದು ಒಂದುಪಾತ್ರೆಯಲ್ಲಿ ಗೊರಟು(ವಾಟೆ) ಗಳನ್ನು ಹಾಕಬೇಕು ಸಿಪ್ಪೆಯಲ್ಲಿ ಹಣ್ಣಿನ ಅಂಶಗಳಿದ್ದರೆ ಚೆನ್ನಾಗಿ ಪಾತ್ರೆಗೆ ಹಿಂಡಬೇಕು.  ಕಾಡು ಮಾವಿನ ಹಣ್ಣಾದರೆ  ಹತ್ತು ಹನ್ನೆರಡು ಹಣ್ಣನ್ನು ಹಾಕಿದರೆ ಒಂದು ಹೊತ್ತಿಗೆ ಇಬ್ಬರಿಗೆ ಸಾಕಾಗುವಷ್ಟು ಸಾಸುವೆ ಮಾಡಬಹುದು.  ಹಣ್ಣುಗಳನ್ನು ಬಿಡಿಸಿದ ನಂತರ ಹಣ್ಣುಗಳನ್ನು ಹಾಕಿದ ಪಾತ್ರೆಗೆ ಬೆಲ್ಲವನ್ನು ಚೆನ್ನಾಗಿ ಕುಟ್ಟಿ ಹಾಕಬೇಕು ಪ್ರಮಾಣಕ್ಕೆ ತಕ್ಕಷ್ಟು ಉಪ್ಪನ್ನು ಹಾಕಿ ಬೆಲ್ಲಕರಗುವ ವರೆಗೆ  ಗೊರಟುಗಳನ್ನು ಹಾಗೂ ಬೆಲ್ಲವನ್ನು ಚೆನ್ನಾಗಿ ಕಯ್ಯಲ್ಲಿ ಕಿವುಚಬೇಕು (ಕಿವುಚುವುದರಿಂದ ಹಣ್ಣಿನ ರಸವು ಚೆನ್ನಾಗಿ ಬಿಟ್ಟು ಉಪ್ಪು ಬೆಲ್ಲದೊಡನೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ).  ನಂತರ ಎಂಟು ಹತ್ತು ಹಸಿ ಮೆಣಸಿನ ಕಾಯನ್ನು ಚೆನ್ನಾಗಿ ಎಣ್ಣೆಯಲ್ಲಿ ಹುರಿದುಕೊಂಡು ಸ್ವಲ್ಪ ಕಾಯಿತುರಿಯ ಜೊತೆಗೆ ನುಣ್ಣಗೆ ಮಿಕ್ಸಿ ಮಾಡಿ ಹಣ್ಣಿನ ಪಾತ್ರೆಗೆ ಬೆರೆಸಿ, ಸಾಸಿವೆ ಜೀರಿಗೆ ಒಣಮೆಣಸಿನ ಒಗ್ಗರಣೆಯನ್ನು ಹಾಕಿದರೆ "ಮಾವಿನ ಹಣ್ಣಿನ ಸಾಸುವೆ" ರೆಡಿಯಾಗುತ್ತದೆ...... ಕಾಡು ಮಾವಿನ ಹಣ್ಣು ಸ್ವಲ್ಪ ಹುಳಿಯಾಗಿರುವುದರಿಂದ ಹುಣಸೆಹಣ್ಣು ಅಥವ ನಿಂಬೆಹಣ್ಣನ್ನು ಹಾಕುವ ಅಗತ್ಯವಿರುವುದಿಲ್ಲ.  ನಗರ ಪ್ರದೇಶಗಳಲ್ಲಿ ಕಾಡುಮಾವಿನ ಹಣ್ಣು ಸ್ವಲ್ಪ ಅಭಾವವಿದ್ದು ಕಸಿ ಮಾವಿನ ಹಣ್ಣು ಹೇರಳವಾಗಿ ದೊರೆಯುತ್ತದೆ.  ಕಸಿ ಮಾವಿನ ಹಣ್ಣಿನಲ್ಲಿ ಹುಳಿಯ ಪ್ರಮಾಣವಿಲ್ಲದೇ ಸಿಹಿ ಜಾಸ್ತಿ ಇರುವುದರಿಂದ ಕಸಿ ಮಾವಿನ ಹಣ್ಣಿನ ಸಾಸುವೆ ಮಾಡುವುದಾದರೆ ಬೆಲ್ಲವನ್ನು ಸ್ವಲ್ಪ ಕಮ್ಮಿ ಹಾಕಿ ಸ್ವಲ್ಪ ಹುಳಿಮಜ್ಜಿಗೆ ಹಾಕಿದರೆ ಆಯ್ತು ರುಚಿ ರುಚಿಯಾದ ಸಾಸುವೆ ಸಿದ್ಧವಾಗುತ್ತದೆ......

     ಮಾಡಿ ನೋಡಿ ರುಚಿ ಹೇಗಿತ್ತೆಂದು ತಿಳಿಸುವಿರಿ ತಾನೆ........  ????????

Saturday, July 3, 2010

ಅಡಿಗೆ ಮಾಡಲು ಸುಲಭ ಉಪಾಯ......

     ಈಗಿನ ಕಾಲದ ಹುಡುಗಿಯರಿಗೆ ಅಡಿಗೆ ಮಾಡೋದು ಅಂದ್ರೆ ಅಲರ್ಜಿ, ಆದ್ರಿಂದ ಪತಿ ಶಿರೋಮಣಿಗಳಿಗೆ ಅಡಿಗೆ ಮಾಡಲು ಸುಲಭ ಉಪಾಯ ಹೇಳಿಕೊಡುತ್ತೇನೆ ಪ್ರಯತ್ನಿಸಿ :) ....

ಯಾವುದೇ ಅಡಿಗೆ ಮಾಡಬೇಕಾದರೂ ಉಪ್ಪು, ಹುಳಿ, ಖಾರ, ತೆಂಗಿನಕಾಯಿ, ಕೊನೆಯಲ್ಲಿ ಒಗ್ಗರಣೆ ಇವಿಷ್ಟು ಕಾಮನ್ನು...... 

ತರ್ಕಾರಿ ಹೆಚ್ಚಿಕೊಂಡು ಇವಿಷ್ಟನ್ನೂ ಹಾಕಿ ಹಾಗೇ ಬೇಯಿಸಿದರೆ ಪಲ್ಯ, 

ಸ್ವಲ್ಪ ನೀರು, ಖಾರದ ಪುಡಿ ಹಾಕಿ ಬೇಯಿಸಿದರೆ ಗೊಜ್ಜು,  

ತೊಗರಿ ಬೇಳೆ ನೀರು ಹಾಕಿ ಬೇಯಿಸಿದರೆ ಹುಳಿ, 

ತರ್ಕಾರಿನೇ ಹಾಕದೇ ಇದ್ರೆ ಸಾರು, 

ತರ್ಕಾರಿ, ಬೇಳೆ ಯಾವುದೂ ಹಾಕದೆ ಕಾಮನ್ ಐಟಮ್ಸನ್ನು ಮಿಕ್ಸಿ ಮಾಡಿದರೆ ಚಟ್ನಿ,  

ಇನ್ನೇನು ಬೇಕು..??  ದಿನ ನಿತ್ಯ ಇದನ್ನೇ ತಾನೆ ಮಾಡೋದು....