ಅಮ್ಮ.... ನೀನು ನನ್ನನ್ನು ನಿನ್ನ ಉದರದಲ್ಲಿ ಪೋಷಿಸಿರುವೆ ಹಾಗೂ ನಿನ್ನ ಎದೆ ಹಾಲಿನಿಂದ ನನ್ನನ್ನು ಬೆಳೆಸಿದ್ದೀಯ. ನಾನು ಬಾಲಕನಾಗಿದ್ದಾಗ ಆಟಗಳಲ್ಲೇ ತಲ್ಲೀನನಾಗಿ, ತುಂಟ ಹುಡುಗನಾಗಿದ್ದೆ, ಹಾಗೂ ನಿನ್ನ ಹಿತವಚನಗಳನ್ನು ನಾನು ಕೇಳುತ್ತಿರಲಿಲ್ಲ. ಕಲಿಯುವಿಕೆಯಲ್ಲಿ ಎಂದಿಗೂ ನನಗೆ ಆಸಕ್ತಿ ಇರಲಿಲ್ಲ, ಕಲಿತು ಬುದ್ಧಿವಂತನಾಗಬೇಕೆಂಬ ಆ ತಿಳುವಳಿಕೆಯನ್ನು ನೀನು ನನ್ನಲ್ಲಿ ಬೆಳೆಸಿದ್ದೀಯ. ಬಾಲ್ಯವು ಅರ್ಥವಾಗದೆ ಕಷ್ಟವೆನಿಸಿತ್ತು, ಆದರೂ ನೀನು ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಸಂತೋಷದಿಂದ ನನ್ನನ್ನು ನೋಡಿಕೊಳ್ಳುತ್ತೀಯ. ಎಂದಾದರೊಮ್ಮೆ ನಾನು ಕಾಯಿಲೆಯಿಂದ ಬಳಲಿದರೆ, ಆಗ ನೀನು ಹಗಲೂ ರಾತ್ರಿ ನನ್ನನ್ನು ಆರೈಕೆ ಮಾಡುತ್ತೀಯ. ನನ್ನ ಮೇಲೆ ನೀನು ಯಾವಾಗಲೂ ಪ್ರೇಮದ ಮಳೆಗರೆಯುತ್ತಿರುವೆ. ಇದು ನಿನ್ನಿಂದ ಹೇಗೆ ಸಾಧ್ಯವಾಗುತ್ತದೆಂದು ನಾನು ಸದಾ ಆಶ್ಚರ್ಯ ಪಡುತ್ತಿರುತ್ತೇನೆ. ನೀನು ಯಾವಾಗಲೂ ನನ್ನಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ನೋಡುತ್ತಿರುತ್ತೀಯ, ಆದರೆ ನನ್ನಲ್ಲಿರುವ ನ್ಯೂನತೆಗಳನ್ನು ಅಥವಾ ದೌರ್ಬಲ್ಯಗಳನ್ನು ನೀನು ಮನಸ್ಸಿಗೆ ಹಚ್ಚಿಕೊಳ್ಳದೇ, ನನ್ನನ್ನು ಪ್ರೀತಿಸುತ್ತೀಯ. ಇದು ನಿನಗೆ ಹೇಗೆ ಸಾಧ್ಯವಾಗುತ್ತದೆ? ತಪ್ಪನ್ನು ಸಂಪೂರ್ಣವಾಗಿ ಕ್ಷಮಿಸುವ ಈ ಹೃದಯ ವೈಶಾಲ್ಯತೆಯು ಅಮ್ಮ ! ನಿನ್ನಲ್ಲಿ ಮಾತ್ರ ಕಂಡುಬರುತ್ತದೆ. ಜಗತ್ತಿನಲ್ಲಿ ಬೇರೆಯಾರಲ್ಲಿಯೂ ಇದು ಕಾಣಸಿಗುವುದಿಲ್ಲ. ಹೇ ಮಾತೆಯೇ...! ಈ ಭೂಮಿಯ ಮೇಲೆ ಬಂಧುಗಳನ್ನು ಮಾಡಿಕೊಳ್ಳುವುದು ಅಂತಹ ಕಷ್ಟಕರವೇನಲ್ಲ. ಆದರೆ ನನ್ನನ್ನು ಹೆತ್ತ ಓ ಅಮ್ಮಾ...! ನಿನ್ನಂಥವರು ಇಲ್ಲಿ ಸಿಗುವುದು ದುರ್ಲಭ. ವೇದವು " ಮಾತೃ ದೇವೋಭವ " ಎಂದು ಆದರದಿಂದ ತಿಳಿಸಿ ಹೇಳಿರುತ್ತದೆ. ನಾನೂ ಕೂಡಾ ಹಾಗೆಯೇ ಭಾವಿಸುತ್ತೇನೆ. ಯಾರು ತನ್ನ ತಾಯಿಯನ್ನು ದೇವರೆಂದು ಭಾವಿಸುತ್ತಾನೋ ಅವನಿಗೆ ಎಲ್ಲೆಲ್ಲೂ ದೇವರೇ ಕಾಣಿಸಿಕೊಳ್ಳುತ್ತಾನೆ. ನಿನ್ನ ಉಪಕಾರಕ್ಕಾಗಿ ನಾನು ನಿನ್ನ ಪೂಜೆಯನ್ನು, ಸಾಷ್ಟಾಂಗ ನಮಸ್ಕಾರವನ್ನು, ಕೀರ್ತನೆಯನ್ನು ಮತ್ತು ನಿನ್ನ ಸೇವೆಯನ್ನು ನಾನು ಯಾವಾಗಲೂ ಮಾಡುತ್ತೇನೆ. ಅಮ್ಮ ! ನಿನ್ನ ಉಪಕಾರಕ್ಕಾಗಿ ನಾನು ನಿನಗೆ ಸದಾ ಕೃತಜ್ಞನಾಗಿರುತ್ತೇನೆ. ನಿನ್ನಲ್ಲಿ ನನಗೆ ಶಾಶ್ವತವಾದ ಭಕ್ತಿಯು ಉಂಟಾಗಲಿ.
ಅಮ್ಮ ನಾನು ಪ್ರತಿದಿನವೂ ನಿನಗೆ ನಮಸ್ಕರಿಸುತ್ತೇನೆ, ನನಗೆ ಸದಾ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡು.
ತಾಯಿಯ ಅನುಗ್ರಹಕ್ಕೆ ಪಾತ್ರನಾದ ಮನುಷ್ಯನು ಖಂಡಿತವಾಗಿಯೂ ಭೂಲೋಕದಲ್ಲಿ ಸನ್ಮಾನ್ಯನೂ ಹಾಗೂ ಸ್ವರ್ಗದಲ್ಲಿ ಸುಖಿಯೂ ಆಗಿರುತ್ತಾನೆ.