Saturday, June 4, 2011

ದಿಂಡಿನ ಹಣ್ಣಿನ ಚಟ್ನಿ

     ಇನ್ನೊಂದು ಅತಿ ಸುಲಭದ ಅಡಿಗೆ ಅತ್ಯಂತ ರುಚಿಯಾಗಿದ್ದು..... ಅದೇನೆಂದ್ರೆ ದಿಂಡಿನ ಹಣ್ಣಿನ ಚಟ್ನಿ....  ದಿಂಡಿನ ಹಣ್ಣು ಅಂದ್ರೆ ಏನೆಂದು ಮೊದಲು ಹೇಳಬೇಕು.  ಇದು ಮಾವಿನ ಹಣ್ಣಿನಲ್ಲೇ ಒಂದು ವಿಧ... ಈ ಹಣ್ಣು ತಿನ್ನಲು ಬರುವುದಿಲ್ಲ ಏಕೆಂದರೆ ಬರೀ ಹುಚ್ಚಟ್ಟೆ ಹುಳಿ.   ಆದರೆ ಇದರ ಮಿಡಿಯನ್ನು ಉಪ್ಪಿನಕಾಯಿ ಹಾಕಲು ಉಪಯೋಗಿಸುತ್ತಾರೆ.  ಉಪ್ಪಿನ ಕಾಯಿಗೆ ಕುಯ್ದು ಉಳಿದ ಮಿಡಿಗಳು ಮರದಲ್ಲಿ ಹಣ್ಣಾಗಿ ಕೆಳಗೆ ಬೀಳುತ್ತವೆ.   ಈ ಹಣ್ಣುಗಳನ್ನು ತಂದು ಸಿಪ್ಪೆ ತೆಗೆದು ಚೆನ್ನಾಗಿ ಹಿಂಡಿ ರಸ ತೆಗೆಯಬೇಕು.  ಒಳ್ಳೇ ಜಾತಿಯ ಹಣ್ಣಾದರೆ ಒಂದು ಹಣ್ಣಿನಲ್ಲಿ ಒಂದು ಲೋಟದಷ್ಟು ರಸ ಬರುತ್ತದೆ.  ಮಲೆನಾಡಿನಲ್ಲಿ ಈ ರಸವನ್ನು ಸಂಗ್ರಹಿಸಿ ಮಳೆಗಾಲದಲ್ಲಿ ಅಡಿಗೆ ಮಾಡಲು ಉಪಯೋಗಿಸುತ್ತಾರೆ.  ಸಾಧಾರಣವಾಗಿ ಇಪ್ಪತ್ತು ಮೂವತ್ತು ಹಣ್ಣುಗಳನ್ನು ಹಿಂಡಿ ರಸವನ್ನು ತೆಗೆದಿಟ್ಟುಕೊಂಡರೆ ವರ್ಷವಿಡೀ ಸಾಕಾಗುತ್ತದೆ.  ಹಣ್ಣಿನ ರಸವು ಕೆಡದಂತೆ ಇಡಲು ಉಪ್ಪನ್ನು ಹಾಕುತ್ತಾರೆ.

     ದಿಂಡಿನ ಹಣ್ಣಿನ ಚಟ್ನಿ ಅಂದರೆ ಮಾಮೂಲಿ ಚಟ್ನಿಯಂತೆ ಕಡ್ಲೆಬೇಳೆ, ಉದ್ದಿನ ಬೇಳೆ ಹುರಿದುಕೊಳ್ಳುವುದು ಬೇಡ.  ಬರೀ ಹಸಿಮೆಣಸನ್ನು ಹುರಿದುಕೊಂಡು  ತೆಂಗಿನಕಾಯಿಯ ಜೊತೆಗೆ ಮಿಕ್ಸಿ ಮಾಡುವುದು ಚಟ್ನಿಗೆ ಹುಣಸೇ ಹಣ್ಣು ಹಾಕುವ ಬದಲಿಗೆ ಈ ಹಣ್ಣಿನ ರಸವನ್ನು ಹಾಕಬೇಕು (ತಿರುವಿದ ನಂತರ ಅಥವಾ ತಿರುವುವ ಹೊತ್ತಿಗೆ).  ಚಟ್ನಿಗೆ ಮಾಮೂಲಿಗಿಂತ ಒಂಚೂರು ಉಪ್ಪನ್ನು ಕಮ್ಮಿ ಹಾಕಬೇಕು, ಏಕೆಂದರೆ ದಿಂಡಿನ ರಸಕ್ಕೆ ಉಪ್ಪನ್ನು ಹಾಕಿರುತ್ತಾರೆ.  ಅಷ್ಟೇ,... ಇನ್ನುಳಿದಿದ್ದು ಒಗ್ಗರಣೆ, ಒಗ್ಗರಣೆ ಜೊತೆ ಪರಿಮಳಕ್ಕೆ ಬೇಕಾದರೆ ಇಂಗು ಹಾಗೂ ಒಂದೆರಡುಕಾಳು ಮೆಂತ್ಯ ಹಾಕಬಹುದು.  ಚಟ್ನಿ ಸಿದ್ಧವಾಯಿತು... ಅನ್ನವನ್ನು ಮಾಮೂಲಿಗಿಂತ ಸ್ವಲ್ಪ ಜಾಸ್ತಿ ಮಾಡಬೇಕು ಅಷ್ಟೇ.....  :)

     ತೆಂಗಿನ ಕಾಯಿ ಉಪಯೋಗಿಸಲು ಇಷ್ಟವಿಲ್ಲದವರು ಬರೀ ಮೆಣಸಿನ ಕಾಯಿಯನ್ನು ಹುರಿದುಕೊಂಡು ತಿರುವಿ ದಿಂಡಿನ ರಸದೊಂದಿಗೆ ಬೆರಸಿಕೊಂಡು ಒಗ್ಗರಣೆ ಹಾಕಿದರೆ ಎಷ್ಟುದಿನ ಬೇಕಾದರೂ ಇಡಬಹುದು ಇದೂ ಕೂಡಾ ಅತ್ಯಂತ ರುಚಿಯಾಗಿರುತ್ತದೆ.

1 comment:

  1. ಗುರುಗಳೆ...

    ನಿಮ್ಮಿಂದ ಚಂದದ ಫೋಟೊ ನಿರೀಕ್ಷೆಯಲ್ಲಿದ್ದೆ..

    ಆದರೆ ಮಸ್ತ್ ಅಡಿಗೆಗಳು...!
    ಹೊಸ ರುಚಿಗಳು....

    ಇದೆ ಹೇಗೆ ಸಾಧ್ಯ??

    ReplyDelete