Showing posts with label ಆಗುಂಬೆ. Show all posts
Showing posts with label ಆಗುಂಬೆ. Show all posts

Saturday, July 31, 2010

ಈಡೇರಿದ ಆಸೆ......

      ಜೋರು ಮಳೆಗಾಲದಲ್ಲಿ ಒಂದ್ಸಲ ಆಗುಂಬೆಗೆ ಹೋಗಬೇಕು ಅನ್ನೋ ಬಯಕೆ ಎರಡು ವರ್ಷಗಳಿಂದ ನನ್ನನ್ನು ಕಾಡುತ್ತಾ ಇತ್ತು.  ಆದ್ರೆ.. ಕಳೆದ ವರ್ಷ ಆಗಲಿಲ್ಲ.  ಈ ವರ್ಷ ಹೋಗಲೇ ಬೇಕು ಅಂತ ತೀರ್ಮಾನ ಮಾಡಿಕೊಂಡಿದ್ದೆ. ಅದಕ್ಕೆ ಸರಿಯಾಗಿ ಪುಷ್ಯ ಮಳೆ ಪ್ರಾರಂಭವಾದಾಗಿನಿಂದ ಒಂದೇ ಸಮನೆ ಬರ್ತಾ ಇತ್ತು.  ಸಾಧಾರಣವಾಗಿ ಹತ್ತು ದಿನದಿಂದ ನಾನ್ ಸ್ಟಾಪ್ ಆಗಿ ಸುರಿತಾ ಇದೆ.. ಆದ್ರೆ ತೀವ್ರತೆ ಇಲ್ಲ.  ಮೊನ್ನೆ ಬುಧವಾರ ಬೆಳಗ್ಗೆ ಒಂದು ಸಾಧಾರಣವಾದ ನೆರೆ ಬಂದಿತ್ತು ನಮ್ಮೂರಿನಿಂದ ಶೃಂಗೇರಿಗೆ ನೆಡೆದುಕೊಂಡು ಹೋಗುವ ದಾರಿಯಲ್ಲಿ ತುಂಗೆ ಅಡಿ ಇಟ್ಟಿದ್ದರಿಂದ ಮಾಮೂಲಿ ನಡೆದು ಹೋಗೋ ದಾರಿಲಿ ಹೋಗೋಕೆ ಆಗುತ್ತಾ ಇರಲಿಲ್ಲ.  ನನ್ನ ಗೆಳೆಯ ಶ್ರೀನಿವಾಸ ಬೆಂಗಳೂರಿನಿಂದ ಬಂದಿದ್ದ.  ಬೆಳಿಗ್ಗೆ ತಿಂಡಿಗೆ ಮಧ್ಯಾನ ಊಟಕ್ಕೆ ನಮ್ಮನೆಗೆ ಬರಲು ಹೇಳಿದ್ದೆ.  ನಂದು ಸಂಧ್ಯಾವಂದನೆ ಜಪ ಎಲ್ಲ ಮುಗಿಸಿಕೊಂಡು ಇಬ್ಬರೂ ಒಟ್ಟಿಗೆ ತಿಂಡಿಗೆ ಕೂತಾಗ ಆಗುಂಬೆಗೆ ಹೋಗುವ ಪ್ರಸ್ತಾಪ ಬಂತು.   ಮಳೆ ಜೋರಾಗಿದ್ದರಿಂದ ಬೈಕ್ ನಲ್ಲಿ ಹೋಗೋಕೆ ರಗಳೆ, ಕ್ಯಾಮರಾ ತಗೋಂಡು ಹೋಗೋಕೆ ಆಗೊಲ್ಲ ಅಂತ ಬಸ್ ನಲ್ಲಿ ಹೋಗೋದು ಅಂತ ಪ್ಲಾನ್ ಮಾಡಿದ್ವಿ.  ಮಧ್ಯಾಹ್ನ 12:30 ಕ್ಕೆ ಊಟ ಮಾಡಿ 1:30 ಉಡುಪಿ ಮಿನಿ ಬಸ್ ಏರಿದ್ದೂ ಆಯ್ತು.  ಸಾಧಾರಣ 2:30 ಹೊತ್ತಿಗೆ ಆಗುಂಬೆ ಘಾಟಿಯಲ್ಲಿ ನಮ್ಮನ್ನು ಇಳಿಸಿದ.  ಬಸ್ ಇಳಿದ ಕೂಡಲೇ ಪ್ರಕೃತಿಯ ಸೌಂದರ್ಯವನ್ನು ನೋಡಿ ಬೆರಗಾಗಿ ಹೋದೆ.  ಮಳೆ ಮೋಡಗಳು, ಗಾಳಿ, ಮಳೆ, ಕಾಡು, ಗುಡ್ಡ, ಅಬ್ಬಾ...... ಒಂದು ಕಡೆ ಪ್ರಕೃತಿಯ ಸೌಂದರ್ಯ ನೋಡಿದ ಸಂತೋಷ..... ಇನ್ನೊಂದು ಕಡೆ ಎರಡು ವರ್ಷಗಳ ಆಸೆ ನೆರವೇರಿತು ಎನ್ನುವ ಸಂತೋಷ.  ಒಟ್ಟಿನಲ್ಲಿ ಸಂತೋಷದ ಮೇಲೆ ಸಂತೋಷ.......
     
     ನಿಮ್ಮ ಸಂತೋಷಕ್ಕಾಗಿ ........ ಅಲ್ಲಿ ಸೆರೆ ಹಿಡಿದ ಕೆಲವು ಚಿತ್ರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ......  ಒಮ್ಮೆ ಮಳೆಗಾಲದಲ್ಲಿ ಆಗುಂಬೆಗೆ ಭೇಟಿ ನೀಡುವ ಪ್ಲಾನ್ ಮಾಡಿ......

ದಕ್ಷಿಣದ ಚಿರಾಪುಂಜಿ ಆಗುಂಬೆಗೆ ಸ್ವಾಗತಿಸುವ ಸ್ವಾಗತ ಫಲಕಗಳು



 ಆಗುಂಬೆಯ ಚೆಕ್ ಪೋಸ್ಟ್
 
ಚೆಕ್ ಪೋಸ್ಟ್ ಎದುರಿಗಿರುವ ಕೆರೆ, ಭಾವಿ ಹಾಗೂ ನೀರಿನ ತೊಟ್ಟಿ 

ಕೆರೆಯ ದಡದಲ್ಲಿ ಕುಳಿತಿರುವ ಬಾತುಕೋಳಿ


ಬಸ್ ಇಳಿದ ಕೂಡಲೇ ನಮ್ಮನ್ನು ಸ್ವಾಗತಿಸಿದ ಅನಾನಸ್ ಮಾರುವ ಹುಡುಗ...

ಹಾಗೂ... ಚರ್ಮುರಿ ಮಾರುವ ಅಜ್ಜ

ಹಗಲು ಕುರುಡು ಅನ್ನುತ್ತೀರಾ...???  ಖಂಡಿತಾ ಅಲ್ಲ... ದಾರಿಯೇ ಕಾಣದಷ್ಟು ಮೋಡಗಳು ಕವಿದಿರುವಾಗ... ಲೈಟ್ ಹಾಕಿಕೊಳ್ಳದೇ ವಾಹನಗಳನ್ನು ಓಡಿಸಲಾಗುದೇ ಇಲ್ಲ...!!


ಸಮೃದ್ಧವಾಗಿ ಬೀಳುವ ಮಳೆಗೆ ಸಮೃದ್ಧವಾಗಿ ಚಿಗುರಿದ ಗುಡ್ಡದ ಮೇಲಿನ ಹುಲ್ಲುಗಳು..


ನೂರಾರು ಜನರನು ಹೊತ್ತು.. ಆಗುಂಬೆಯ ಪ್ರಸಿದ್ಧ ಸೂರ್ಯಾಸ್ತವನ್ನು ತೋರಿಸುವ ಸ್ಥಳ.. ಮೋಡ ಕವಿದು ನಿರ್ಜನವಾಗಿರುವುದು.

ನನ್ನನ್ನು ಬೀಳಿಸಿ ಬಿಟ್ಟಿದ್ದಾರೆ.... ಯಾರಾದರೂ ನಿಲ್ಲಿಸಬಾರದೇ..??

ಕಾಡಿನೊಳಗೆ ನುಗ್ಗಿ ಬರುತ್ತಿರುವ ಮೋಡಗಳು...

ಆಗಸದಲಿ ಚಿತ್ತಾರ ಬಿಡಿಸಿದ ಮರಗಳು... ಚಿತ್ರ 1..

ಚಿತ್ರ 2..

ಕಾಡು, ಮೋಡ, ಘಾಟಿರಸ್ತೆ... ಚಿತ್ರ 1..

ಕಾಡು, ಮೋಡ, ಘಾಟಿರಸ್ತೆ... ಚಿತ್ರ 2..

ಪ್ರಕೃತಿಯ ಮಡಿಲಲ್ಲಿ ನನ್ನ ಗೆಳೆಯ ಶ್ರೀನಿವಾಸ್.....


ಆಗುಂಬೆ ಘಾಟಿ ಮೇಲೇರಿ ಬರುತ್ತಿರುವ ಅನ್ನಪೂರ್ಣೇಶ್ವರಿ...

ಒಮ್ಮೆಲೆ... ಮೇಲೇರಿ ಬರುತ್ತಿರುವ ಮಳೆ ಮೋಡಗಳು....!!!

ಮೋಡಗಳ ಚಿತ್ರ ಸೆರೆಹಿಡಿಯುತ್ತಿರುವ ಶ್ರೀನಿವಾಸ...

ಮಳೆ ಸುರಿಸಿ ನೀರಾಗಿಹೋದ ಮೋಡವನೆಲ್ಲಿ ಹುಡುಕಲಿ....??

ನನಗೂ... ಹೀಗೇ.... ಮರದ ರೀತಿ ಮೌನವಾಗಿ ನಿಲ್ಲುವಾಸೆ.....

ಆಗುಂಬೆ ಘಾಟಿಯಲ್ಲಿ ಒಟ್ಟು 14 ತಿರುವುಗಳಿವೆ, ನಾವು 6 ತಿರುವು ಕೆಳಗಿಳಿದು ಹಿಂತಿರುಗುತ್ತಿರುವುದು....

ZUUPP....... ಎಂದು ಬಂದ ಬಸ್...   :)

ಈ ಬೋರ್ಡ್ ನೋಡಿದ ಮೇಲೇ..... ಕ್ಯಾಮರಾದಿಂದ ಕಣ್ಣು ಹೊರಗೆ ಬಂದಿದ್ದು...   :)
ಎಲ್ಲವೂ ಮೋಡದ ಮಯ.... ಈ ಮರ ಗಿಡಗಳಂತೆ ನಾನು ಹಾಗೂ ನನ್ನ ನೈಕಾನ್ ಕೂಡಾ....  :)

ಮತ್ತೊಂದು ಸಲ... ZUUPP...

ಕಸದ ತೊಟ್ಟಿಗೂ ಹಾಲುಣಿಸುತ್ತಿರುವ ಪ್ರಕೃತಿ ಮಾತೆ....!!
(ಗುಡ್ಡದ ಮೇಲಿನಿಂದ ಧುಮುಕುತ್ತಿರುವ ಜಲಧಾರೆ) ಚಿತ್ರ 1..

ಚಿತ್ರ 2..

ಚಿತ್ರ 3..

ಕಾಡಿನಲ್ಲೂ ಕನ್ನಡದ ಕವಿ.....

ಆಗುಂಬೆಯ ಅತಿಥಿ ಗೃಹ


ನೆನಪಿದೆಯೇ....??   ಶಾಲೆಗೆ ಹೋಗುವಾಗ ಆಡಿದ ಕೊಕ್ಕೋ.. ಆಟ...??

ವಾಲೀ ಬಾಲಿನಾಟ... ಚಿತ್ರ 1..

ವಾಲೀ ಬಾಲಿನಾಟ... ಚಿತ್ರ 2..

ಊರೊಳಗಿನ ಒಂದು ದೃಶ್ಯ...

ಊರೊಳಗೂ ಬಿಡದೇ ಕವಿದಿರುವ ಮೋಡಗಳು...

ಆಗುಂಬೆಯ B.S.N.L. ಕಛೇರಿ.....    :)

ಈ ಚಿತ್ರಕ್ಕೆ ತಲೆ ಬರಹ ಬೇಡ....

ಆಗುಂಬೆ ಬಸ್ ನಿಲ್ದಾಣ...

ಬಸ್ ನಿಲ್ದಾಣದ ಒಂದು ದೃಶ್ಯ...

L.I.C., ಯಲ್ಲಿ ಚೆನ್ನಾಗಿ ಹಣ ಹೂಡಿಸಿ ಆಗುಂಬೆಯಂತಹಾ ಊರಿನಲ್ಲಿ     ಇರುವುದಾದರೆ ಜೀವನವು ಆನಂದವಾಗಿರುತ್ತದೆ...

     
     ಆಗುಂಬೆ ಘಾಟಿಯಿಂದ ಬಸ್ ಸ್ಟ್ಯಾಂಡಿನವರೆಗೂ (ಸುಮಾರು 2.5 km) ಊರನ್ನು ಸರ್ವೇ ಮಾಡುತ್ತಾ (ಕ್ಯಾಮೆರಾ ಕಣ್ಣಿನಲ್ಲಿ) ಬಸ್ ನಿಲ್ದಾಣ ಸೇರುವಹೊತ್ತಿಗೆ 6:15 ಆಗಿತ್ತು ಒಂದು ಹತ್ತು ನಿಮಿಷದಲ್ಲೇ ನಮ್ಮನ್ನು ಕರೆದುಕೊಂಡು ಹೋದ ಬಸ್ಸು ಉಡುಪಿಗೆ ಹೋಗಿ ವಾಪಸ್ ಬಂದಿತ್ತು ಅದರಲ್ಲಿ ಶೃಂಗೇರಿಗೆ ಹಿಂದಿರುಗಿದೆವು, ನನ್ನಾಸೆಯು ಈಡೇರಿತ್ತು :)   ಆದರೆ ನನ್ನ ಕ್ಯಾಮೆರಾ ಸಂಪೂರ್ಣ ಒದ್ದೆಯಾಗಿತ್ತು  :(

ನೀವೂ ಒಮ್ಮೆ ಭೇಟಿ ಕೊಡುವಿರಿ ತಾನೇ....??  
ನಿಮ್ಮ ಅನಿಸಿಕೆಗಳಿಗೆ ಸ್ವಾಗತ................

Saturday, June 26, 2010

ಆಗುಂಬೆ......

     " ಆಗುಂಬೆ "   ಎಂದೊಡನೆ ಡಾ|| ರಾಜ್ ಕುಮಾರ್ ಅವರ "ಆಗುಂಬೆಯಾ ಪ್ರೇಮ ಸಂಜೆಯಾ...."  ಹಾಡು ಎಲ್ಲರಿಗೂ ನೆನಪಾಗುತ್ತದೆ.  ಹಾಗಾದರೆ ಆಗುಂಬೆ ಮರೆಯಲಾಗದಷ್ಟು ಚೆನ್ನಾಗಿದೆಯೇ.....?? ಎನ್ನುವುದು ಎಲ್ಲರ ಮನಸ್ಸಿಗೂ ಬರುತ್ತದೆ.  ಆ ಹಾಡನ್ನು ಆಗುಂಬೆಯಿಂದ ಎಂಟು ಕಿ.ಮೀ. ದೂರದಲ್ಲಿರುವ "ಬರ್ಕಣ" ಎನ್ನುವಲ್ಲಿ ಚಿತ್ರೀಕರಿಸಿದ್ದರೆಂದು ಕೇಳಿದ್ದೆ.  ಆಗುಂಬೆಯು ಭಾರತದಲ್ಲಿ ಅತ್ಯಂತ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡಿದೆ (ಮೊದಲನೆಯದು ಚಿರಾಪುಂಜಿ).  ಇಲ್ಲಿ ವರ್ಷಕ್ಕೆ ಸರಾಸರಿ 301 ಇಂಚು ಮಳೆಯಾಗುತ್ತದೆ.  1946 ನೇ ಇಸವಿ ಆಗಸ್ಟ್ ತಿಂಗಳಲ್ಲಿ 177.5 ಇಂಚು ಮಳೆಯಾಗಿ ದಾಖಲೆಯಾಗಿದೆ.  ಮಳೆಗಾಲದಲ್ಲಿ ಆಗುಂಬೆಗೆ ಹೋದರೆ ಅದರ ಮಜವೇ ಬೇರೆ..... ಮಳೆ ಮೋಡಗಳೆಲ್ಲ ಕೈಗೆ ಸಿಕ್ಕುತ್ತವೆಂದರೆ ನೀವು ನಂಬುತ್ತೀರ....??  ನಿಜವಾಗಿ ಸಿಕ್ಕುತ್ತದೆ. ಮೋಡದೊಳಗೆ ಹೊಕ್ಕಾಗ ತಣ್ಣಗೆ ಛಳಿಯಾಗುವ ಅನುಭವ ಹೇಳತೀರದು.   ಮಳೆಯಲ್ಲಿ ಛತ್ರಿ ಹಿಡಿದುಕೊಂಡು ಸುತ್ತಾಡುವಾಗ ಒಬ್ಬರು ಆಡಿದ ಮಾತು ಇನ್ನೊಬ್ಬರಿಗೆ ಕೇಳದಷ್ಟು ಜೋರಾದ ಆರ್ಭಟ ಮಳೆರಾಯನದು.   ಈ ಆಗುಂಬೆಯ ಸುತ್ತಮುತ್ತ ದಟ್ಟವಾದ ಕಾಡು ಹಾಗೂ ಹಲವಾರು ಜಲಪಾತಗಳನ್ನು ಕಾಣಬಹುದು, ಬರ್ಕಣ ಜಲಪಾತ, ಜೋಗಿಗುಂಡಿ ಜಲಪಾತ, ಒನಕೆ ಅಬ್ಬಿ ಜಲಪಾತ.... ಇತ್ಯಾದಿಗಳು (wikipedia).   ಸೂರ್ಯಾಸ್ತವನ್ನು ನೋಡಲು ಪ್ರಖ್ಯಾತಿ ಪಡೆದ ಜಾಗಗಳಲ್ಲಿ ಇದೂ ಒಂದಾಗಿದೆ.
   
     ಮೊನ್ನೆ ಇಪ್ಪತ್ತ ನಾಲ್ಕನೇ ತಾರೀಖು ನನ್ನ ಸಹೋದ್ಯೋಗಿಯ ಮದುವೆ ಹೆಬ್ರಿಯಲ್ಲಿ ಇತ್ತು.  ಸಹೋದ್ಯೋಗಿ ಮದ್ವೆ ಅಂದಮೇಲೆ ಹೋಗಲೇಬೇಕಲ್ಲ ಮಳೆರಾಯನ ಕಾಟದಿಂದ ಬೈಕ್ ನಲ್ಲಿ ಹೋಗಲಿಕ್ಕಾಗದೆ ಒಂದು ಕಾರು ತೆಗೆದುಕೊಂಡು ನನ್ನ ಸಹೋದ್ಯೋಗಿಗಳಾದ ಹರೀಶ್ ಮತ್ತು ಶಶಾಂಕ್ ಹೋಗಿದ್ವಿ.   ಮದುವೆ ಎಲ್ಲ ಚೆನ್ನಾಗಿ ಆಯಿತು ಹಾಗೇ ಬರುವಾಗ ಜೋಗಿಗುಂಡಿ ಜಲಪಾತಕ್ಕೆ ಹೋಗೋಣ ಅಂತ ಕಾಣಿಸ್ತು, ಮನಸ್ಸಿಗೆ ಬಂದಮೇಲೆ ಹೋಗದೇ ಇರೋಕ್ಕೆ ಆಗುತ್ಯೇ...??  ಸರಿ ಹೋಗಿದ್ದಾಯಿತು.  ಕಾರು ಆಲ್ಲಿಯವರೆಗೂ ಹೋಗಲಿಲ್ಲ, ಟಾರ್ ರಸ್ತೆ ಬಳಿ ನಿಲ್ಲಿಸಿ ನಡಿಗೆ ಶುರು ಮಾಡಿದ್ವಿ ಹೆಚ್ಚು ಕಮ್ಮಿ ಒಂದು ಕಿಮೀ ನಡಿಬೇಕು ಕಾಡಿನಲ್ಲಿ..., ದಟ್ಟವಾದ ಕಾಡಾದ್ದರಿಂದ ಒಂಥರಾ ಮಜಾ ಇತ್ತು ಮಳೆಗಾಲ ಬೇರೇ ಅಲ್ವಾ..??  ನಾವು ಹೋಗೋವಾಗ ನಮ್ಮ ಪುಣ್ಯಕ್ಕೆ ಮಳೆ ಬಿಟ್ಟಿತ್ತು.  ಮಳೆಗಾಲದ ಪ್ರಾಣಿ ಪಕ್ಷಿಗಳ ಕೂಗಾಟದ ಜೊತೆ ನಮ್ಮ ನಡೆದಾಟ ಚೆನ್ನಾಗಿತ್ತು.  ಆದರೆ ಇಂಬಳಗಳ ಸಂತೆ ನೋಡಿ...... ಒಬ್ಬೊಬ್ಬರಿಗೆ ತಲಾ ಏಳು ಎಂಟಕ್ಕೆ ಕಮ್ಮಿ ಇಲ್ಲದೆ ಹತ್ತಿಕೊಂಡ್ವು :)  ಅಂತೂ ಗುರಿ ಮುಟ್ಟಿದ್ವಿ. 
      
     ತುಂಬಾ ಚೆನ್ನಾಗಿದೆ ಜಾಗ ನೀವು ಆ ಕಡೆ ಪ್ರಯಾಣ ಮಾಡುವ ಸನ್ನಿವೇಶ ಬಂದಲ್ಲಿ ತಪ್ಪದೇ ಒಮ್ಮೆ ಭೇಟಿ ಕೊಡಿ.  ಅಲ್ಲಿ ತೆಗೆದ ಕೆಲವು ಚಿತ್ರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.

ಈ ಚಿತ್ರವು ಆಗುಂಬೆ ಘಾಟಿಯ ಮೇಲಿನಿಂದ ತೆಗೆದಿರುವುದು ಸೋಮೇಶ್ವರ ಎಂಬ ಊರನ್ನು ಸ್ಪಷ್ಟವಾಗಿ ಕಾಣಬಹುದು. 

ಪ್ರಕೃತಿಯ ಒಂದು ದೃಶ್ಯ 

 ಪರ್ವತವನ್ನು  ತಬ್ಬಿಕೊಂಡಿರುವ ಮೋಡಗಳು

ಅಡವಿಯೊಳಗೊಂದು ಮನೆ ಮಾಡಿ ಮೃಗಗಳಿಗಂಜಿದೊಡೆಂತಯ್ಯ...?
ಕಾಡಿನ ಮಧ್ಯದಲ್ಲಿರುವ ಗದ್ದೆ ಹಾಗೂ ಮನೆ

 ದಟ್ಟವಾದ ಕಾಡು

ಆಗುಂಬೆಯ ಸೂರ್ಯಾಸ್ತವನ್ನು ನೋಡಲು ಮಾಡಿರುವ ವ್ಯವಸ್ಥೆ 

 ಜೋಗಿಗುಂಡಿ ಜಲಪಾತ ಚಿತ್ರ 1

ಚಿತ್ರ 2

 ಚಿತ್ರ 3

 ಚಿತ್ರ 4

ಆಶೀರ್ವಾದವೇ..?? (ನನ್ನ ಸಹೋದ್ಯೋಗಿ ಹರೀಶ್ ಹಾಗೂ ಶಶಾಂಕ್)

 ಸುಮಾರು 60 ಅಡಿಗಳಿಗೂ ಹೆಚ್ಚು ಎತ್ತರ ಬೆಳೆದು ನಿಂತಿರುವ ಹೆಮ್ಮರಗಳು

ಧನ್ಯವಾದಗಳೊಂದಿಗೆ,
ನಿಮ್ಮ ಗುರುಪ್ರಸಾದ್,