ಇದು ನನ್ನ ಅನುಭವ...... ನಾನಾಗ ಪ್ರಥಮ ಪದವಿಯಲ್ಲಿ ಓದುತ್ತಿದ್ದೆ.......ಮಿಟ್ಟರ್ಮ್ ಎಕ್ಸಾಮ್ ಮುಗಿದ ಮೇಲೆ 15 ದಿನ ರಜಾ ಇತ್ತು ಅತ್ತೆ ಮಗ ಊರಿಗೆ ಬಂದಿದ್ದ ಅವನ ಜೊತೆ ಅತ್ತೆ ಮನೆಗೆ ಹೋಗೋಣಾ ಅಂತ ಅನ್ನಿಸ್ತು.... ಅವರು ಆ ಸಮಯದಲ್ಲಿ ಕಳಸಾಪುರದಲ್ಲಿ ಇದ್ದರು.... ಅತ್ತೆಯ ಮಗ ನನಗೆ ಸಂಬಂಧಿ ಅನ್ನೋದಕ್ಕಿಂತ ಹೆಚ್ಚಾಗಿ ಆಪ್ತ ಸ್ನೇಹಿತನಾಗಿದ್ದ..... ಎಲ್ಲಿ ಹೋಗೋದಾದ್ರೂ..... ಏನು ಮಾಡೋದಾದ್ರೂ...... ಅವನಿಗೆ ಹೇಳದೇ ಕೇಳದೇ ಮಾಡುತ್ತಿರಲಿಲ್ಲ...... ಅವನೂ ಅಷ್ಟೇ ಏನೇ ಇದ್ದರೂ ನನ್ನ ಬಳಿ ಹೇಳಿಕೊಳ್ಳಬೇಕು.... ಹೇಳಿಕೊಂಡರೇ ಅವನಿಗೆ ಸಮಾಧನ.... ಹಾಗಿತ್ತು ನಮ್ಮಿಬ್ಬರ ಸ್ನೇಹ..... ನಾನು ಶೃಂಗೇರಿಯನ್ನು ಬಿಟ್ಟು ಬೇರೆ ಊರನ್ನು ನೋಡಿದವನೇ ಅಲ್ಲ ಆದ್ದರಿಂದ ಮನೆಲೂ ಒಪ್ಪಿಗೆ ಸಿಕ್ಕಿತು. ಅಮ್ಮ ಒಂದು ನಾಲ್ಕು ದಿನ ಹೋಗಿ ಬಾ ಅಂತ ಕಳಿಸಿದರು.... ಅತ್ತೆ ಮನೆ ಕ್ಯಾಂಪ್ ಏನೋ ಚೆನ್ನಾಗೇ ಇತ್ತು ನಾಲ್ಕು ದಿನ ಕಳೆದಿದ್ದು ಗೊತ್ತಾಗಲೇ ಇಲ್ಲ ನಂತ್ರ ಊರಿಗೆ ಹೊರಡಬೇಕಲ್ಲ.... ಅತ್ತೆ ಮಗನೂ ನನ್ನ ಜೊತೆ ಶೃಂಗೇರಿಗೆ ವಾಪಸ್ ಬರ್ತಿನಿ ಅಂದ.... ನನಗೂ ಅವನಿಗೂ ಒಬ್ಬರನ್ನೊಬ್ಬರು ಬಿಟ್ಟಿರುವುದು ಅಂದರೆ ಆಗುತ್ತಿರಲಿಲ್ಲ. ನಾಳೆ ಬೆಳಿಗ್ಗೆ ತಿಂಡಿ ತಿಂದು ಹೊರಡೋಣಾ ಅಂತ ಪ್ಲಾನ್ ಮಾಡಿದ.... ನಮ್ಮಿಬ್ಬರಿಗೂ ವಿಪರೀತ ಸಿನಿಮಾ ಹುಚ್ಚು ಇತ್ತು (ಈಗಿಲ್ಲ ಬಿಡಿ.... ಪ್ರಾಯಶಃ ಆ ವಯಸ್ಸೇ ಹಾಗಿರಬೇಕು.....) ನಾವು ಅಲ್ಲಿಂದ ಚಿಕ್ಕಮಗಳೂರಿಗೆ ಬಂದೇ ಶೃಂಗೇರಿಗೆ ಬರಬೇಕಿತ್ತು...... ಹಾಗೇ ಚಿಕ್ಕಮಗಳೂರಿನಲ್ಲಿ ಯಾವುದಾದರೂ ಸಿನಿಮಾ ನೋಡಿಕೊಂಡು ಬರೋಣಾ ಅಂತಾನೂ ಪ್ಲಾನ್ ಇತ್ತು (ಆದ್ರೆ ಮನೆಲಿ ಹೇಳಿರಲಿಲ್ಲ ಬೈತಾರೆ ಅಂತ )....... ಅವನ ಪ್ಲಾನ್ ಪ್ರಕಾರನೇ ಬೆಳಿಗ್ಗೆ ತಿಂಡಿ ತಿಂದು ಕಳಸಾಪುರದಿಂದ ಚಿಕ್ಕಮಗಳೂರಿಗೆ ಹತ್ತು ಗಂಟೆ ಹೊತ್ತಿಗೆ ಬಂದ್ವಿ.... ಮಾರ್ನಿಂಗ್ ಷೋ ಗೆ ಸಲ್ಮನ್ ಖಾನ್, ಮಾಧುರಿ ನಟಿಸಿರುವ “ಸಾಜನ್” ಸಿನಿಮಾ ಇತ್ತು (ಟಾಕೀಸ್ ಹೆಸರುಗಳು ಮರ್ತುಹೋಗಿದೆ) ಹೋಗಿ ನೋಡಿದ್ವಿ..... ನಂತ್ರ ಮ್ಯಾಟ್ನಿ ಗೆ ತೆಲುಗು “ಭಾರತ್ ಬಂದ್”.... ತಲೇಲಿ ಸಿನಿಮಾ ನೋಡೋದು ಒಂದು ಬಿಟ್ರೆ ಶೃಂಗೇರಿ ಕಡೆ ಬಸ್ ಎಷ್ಟು ಹೊತ್ತಿಗೆ ಇದೆ ಎಂದು ತಿಳಿದುಕೊಳ್ಳುವುದನ್ನೂ ಮರೆತಿದ್ವಿ..... ಎರೆಡೂ ಸಿನಿಮಾ ಮುಗಿಸಿಕೊಂದು ಹೋಟೆಲ್ ಗೆ ಹೋಗಿ ಸರಿಯಾಗಿ ತಿಂಡಿ ತಿಂದು ಕಾಫಿ ಕುಡಿದು ಇನ್ನು ಊರಿಗೆ ಹೋಗೋಣಾ ಅಂತ ಬಸ್ ಸ್ಟ್ಯಾಂಡ್ ಕಡೆ ಬಂದು ಬಸ್ ಕೇಳಿದ್ರೆ............. ಶೃಂಗೇರಿಗೆ ಇದ್ದ ಲಾಸ್ಟ್ ಬಸ್ ಸಂಜೆ ಆರು ವರೆಗೆ ಹೊರಟು ಹೋಗಿತ್ತು.... ಅದು ಬಿಟ್ರೆ ಇನ್ನು ರಾತ್ರಿ ಎರೆಡುವರೆಗೆ ಮೈಸೂರು ಬಸ್ .... ಆಗಿನ್ನೂ ಗಂಟೆ 7-30 ಆಗಿತ್ತು ಅಷ್ಟೇ..... ಸುಮ್ನೆ ಸ್ವಲ್ಪ ಹೊತ್ತು ಬಸ್ ಸ್ಟ್ಯಾಂಡ್ ನಲ್ಲಿ ಕೂತ್ವಿ ಟೈಂ ಹೋಗ್ಲಿಲ್ಲ........ ಹಾಗೇ ಒಂದು ರೌಂಡ್ ಸುತ್ತಿಕೊಂಡು ಬರೋಣಾ ಅಂತ ಚಿಕ್ಕಮಗಳೂರು ನಗರ ಪ್ರದಕ್ಷಿಣೆ ಶುರು ಮಾಡಿದ್ವಿ..... ದಾರಿಯಲ್ಲಿ ಕಾಣಿಸಿದ ನಾಗಲಕ್ಷ್ಮಿ ಟಾಕೀಸ್ ನಲ್ಲಿ ಯಾವುದೋ ಕನ್ನಡ ಸಿನಿಮಾ ಹಾಕಿದ್ದ.... ಹೆಸರು ನೆನಪಿಲ್ಲ..... ಸೆಕೆಂಡ್ ಷೋ ಒಂಭತ್ತು ಗಂಟೆಗೆ ಇತ್ತು.... ಸರಿ ಹೋಗೋಣಾ ಇನ್ನೇನು ಬಸ್ ಎರಡುವರೆ ಗಂಟೆಗೆ ಅಲ್ವಾ ಅಂತ ತೀರ್ಮಾನ ಮಾಡಿಕೊಂಡು ಸ್ವಲ್ಪ ಹೊತ್ತು ಅಲ್ಲಿ ಇಲ್ಲಿ ಅಡ್ಡಾಡಿ ಮತ್ತೆ ಟಾಕೀಸ್ ಗೆ ಬಂದು ಸಿನಿಮಾಗೆ ಹೋದ್ವಿ...... ಯಾವುದೋ ಕಿತ್ತು ಹೋಗಿರೋ ಸಿನಿಮಾ..... ಟೈಂ ಪಾಸ್ ಆಗ್ಬೇಕಲ್ಲಾ ಅಂತ ಕಷ್ಟಪಟ್ಟುಕೊಂಡು ಪೂರ್ತಿ ನೋಡಿದ್ವಿ..... ಅದಕ್ಕೆ ಕಾರಣವೂ ಇದೆ..... ಡಿಸೆಂಬರ್ ತಿಂಗಳು ಅಂದರೆ ಈ ಮಲ್ನಾಡ್ ನಲ್ಲಿ ಸಿಕ್ಕಾಪಟ್ಟೆ ಚಳಿ ಇರುತ್ತೆ.... ಅದ್ರಲ್ಲೂ ಚಿಕ್ಕಮಗಳೂರು ಚಳಿ ಅಂದ್ರೆ ಫೇಮಸ್ಸು..... ಚಳಿಯ ಅನುಭವ ಆಗಬೇಕಾದರೆ ಯಾವಾಗಲಾದರೂ ಒಂದುಸಲ ರಾತ್ರಿ ಚಿಕ್ಕಮಗಳೂರು ಬಸ್ ಸ್ಟ್ಯಾಂಡಿನಲ್ಲಿ ಬಸ್ ಕಾಯಬೇಕು...... ಅಲ್ಲಿ ಚಳಿಯಲ್ಲಿ ನಡುಗುವುದಕ್ಕಿಂತ ಟಾಕೀಸ್ ನಲ್ಲಿ ಬೆಚ್ಚಗ ಕೂತಿರಬಹುದು ಅನ್ನೋ ಯೋಚನೆ ಇದ್ದಿದ್ರಿಂದ ಈ ಪ್ಲಾನ್ ಮಾಡಿದ್ವಿ..... ಸಿನಿಮಾ ನೋಡಿಕೊಂಡು ರಾತ್ರಿ ಒಂದು ಗಂಟೆಗೆ ಬಸ್ ಸ್ಟ್ಯಾಂಡ್ ಗೆ ಬಂದ್ವಿ.... ಹಾಳಾದ್ದು ಚಳಿಗೆ ಹೊಟ್ಟೆ ಎಲ್ಲ ನಡುಗುತ್ತಿತ್ತು..... ನಡುಗುತ್ತಾ ಕಲ್ಲು ಬೆಂಚ್ ಮೇಲೆ ಕೂತಿದ್ವಿ..... ಹಾಗೇ ಒಂದಷ್ಟು ಹೊತ್ತು ಹೋಯ್ತು .... ಆ ಹೊತ್ತಿಗೆ ಯಾರೋ ಹೇಳಿದ್ದು ನೆನಪಾಯ್ತು.... ಪಾನ್ ಪರಾಗ್ ತಿಂದರೆ ಮೈ ಬಿಸಿ ಆಗುತ್ತೆ ಅಂತ. ಇಬ್ಬರೂ ಮಾತಾಡಿಕೊಂಡು ಪಾನ್ ಪರಾಗ್ ತಿನ್ನೋದು ಅಂತ ತೀರ್ಮಾನ ಮಾಡಿಕೊಂಡ್ವಿ. ಆದರೆ ಅದರ ಬಗ್ಗೆ ಇಬ್ಬರಿಗೂ ಮಾಹಿತಿ ಇರಲಿಲ್ಲ ಅದು ಜರ್ದಾ ಅಂತ ಗೊತ್ತಿತ್ತು ಬಿಟ್ರೆ ಬೇರೇನೂ ಅದ್ರ ಬಗ್ಗೆ ಗೊತ್ತಿರಲಿಲ್ಲ..... ಹೇಗೆ ತಿನ್ನಬೇಕು ಎಷ್ಟು ತಿನ್ನಬೇಕು ಅಂತನೂ ಗೊತ್ತಿರಲಿಲ್ಲ...... ಮೊದಲ ಬಾರಿ ತಿನ್ನುವ ಪ್ರಯತ್ನ ಮಾಡಿದ್ವಿ.... ಅಂಗಡಿಗೆ ಹೋಗಿ ತರುವುದು ಯಾರು ಅನ್ನುವ ಸಮಸ್ಯೆ ಬಂತು...... ಯಾರಾದರೂ ಏನಾದರೂ ಕೇಳಿದ್ರೆ ಅನ್ನೋ ಭಯ..... ಆದ್ರೂ ಧೈರ್ಯ ಮಾಡಿ ಇಬ್ಬರೂ ಅಂಗಡಿಗೆ ಹೋಗಿ ಒಂದು ಪಾನ್ ಪರಾಗ್ ಕೊಡಿ ಅಂತ ಕೇಳಿದ್ವಿ....... ಕೂಡಲೇ ಅಂಗಡಿಯವನಿಂದ ಬಂದ ಪ್ರಶ್ನೆಗೆ ಇಬ್ಬರೂ ಬೆರಗಾದ್ವಿ..... “ಗುಟ್ಕಾನೋ ಪ್ಲೈನೋ “ ಅಂತ ಕೇಳಿದ್ದ ಅವನು....... ನಾವೆಂಥಾವರು ಅಂದ್ರೆ ಅದರಲ್ಲಿ ಎರಡು ತರಹ ಬರುತ್ತೆ ಅಂತನೂ ಗೊತ್ತಿರಲಿಲ್ಲ...... ಇಬ್ಬರೂ ಮುಖ ಮುಖ ನೋಡಿಕೊಂಡ್ವಿ..... ಏನೋ ಭಯ, ತಳಮಳ, ಅನುಮಾನ ಎಲ್ಲ ಒಮ್ಮೆಲೇ ಶುರುವಾಯಿತು..... ಗುಟ್ಕಾ ಅಂತ ಹೆಸರು ಕೇಳಿದ ಕೂಡಲೇ ಅದೇನೋ ಭಯಂಕರ ಇರಬೇಕು ಅಂತ ಬರೀ ಪ್ಲೈನ್ ಕೊಡಿ ಅಂತ ಒಂದು ಪ್ಯಾಕ್ ತಗೊಂಡ್ವಿ...... ಅಷ್ಟು ಹೊತ್ತಿಗೆ ನಮ್ಮ ಚಳಿ ಎಲ್ಲಿ ಹೋಗಿತ್ತೋ ಗೊತ್ತಿಲ್ಲ ನಮಗರಿವಿಲ್ಲದೆ ಕಿವಿ ಎಲ್ಲ ಬಿಸಿ ಬಿಸಿ ಆಗಿ ಎದೆ ಬಡಿತ ಕೂಡಾ ಜಾಸ್ತಿ ಆಗಿತ್ತು. ಬಂದು ಪುನಹ ಕಲ್ಲು ಬೆಂಚಿನ ಮೇಲೆ ಕೂತ್ವಿ.... ತಿನ್ನುವುದಕ್ಕೆ ಭಯ... ಏನು ಆಗುತ್ತೋ ಅಂತ..... ತಲೆ ತಿರುಗಿದರೆ....?? ವಾಂತಿ ಆದರೆ....?? ಈ ರಾತ್ರಿ ಇಬ್ಬರೇ ಏನು ಮಾಡೋದು ಅಂತ.... ಕೊನೆಗೆ ಬಸ್ ನಲ್ಲಿ ಕೂತ ಮೇಲೆ ತಿನ್ನೋಣ ಅಂತ ತೀರ್ಮಾನ ಮಾಡಿಕೊಂಡು ಪ್ಯಾಕೆಟ್ಟನ್ನು ಜೋಬಿಗೆ ಸೇರಿಸಿದ್ವಿ.... ಏನೋ ಒಂದು ಥರ ಭಯ,... ತಪ್ಪು ಮಾಡುತ್ತಿರುವೆವು ಅನ್ನೊ ಭಾವನೆ ಇವೆಲ್ಲಾ ಮನದೊಳಗೆ ಉಂಟಾಗುತ್ತಿತ್ತು..... ಆದರೂ ಒಮ್ಮೆ ಹೇಗಿರುತ್ತದೆ ನೋಡಬೇಕೆಂಬ ಚಪಲ ಕೂಡಾ ಇತ್ತು.... ಪಾನ್ ಪರಾಗ್ ಕೈ ಸೇರಿದ ಮೇಲೆ ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.... ಗಂಟೆ ಎರಡೂವರೆ ಆಗಿ ಮೈಸೂರು ಶೃಂಗೇರಿ ಬಸ್ ಬಂದೇ ಬಿಟ್ಟಿತ್ತು....... ಕೂಡಲೇ ಬಸ್ ಏರಿ ಮೊದಲು ಬಸ್ ನಲ್ಲಿ ಪರಿಚಯದವರು ಯಾರಾದರೂ ಇದ್ದಾರಾ ಎಂದು ನೋಡಿದ್ವಿ....... ಇದ್ದರೆ ಅವರೆದುರು ಹೇಗೆ ತಿನ್ನುವುದು ಎನ್ನೋ ಅಂಜಿಕೆ..... ಪುಣ್ಯಕ್ಕೆ ಯಾರೂ ಇರಲಿಲ್ಲ..... ಬಸ್ ನಲ್ಲಿ ಕೊನೆಯ ಸಾಲಿನ ಸೀಟನ್ನು ಆರಿಸಿಕೊಂಡ್ವಿ ಯಾರಿಗೂ ಕಾಣಬಾರದು ಅಂತ.... ಕಿಟಕಿ ಪಕ್ಕನೂ ಕೂತಿದ್ದು ಆಯ್ತು ವಾಂತಿ ಆದರೆ ಅನುಕೂಲವಾಗುತ್ತೆ ಅಂತ...... ಎಲ್ಲಾ ಸಿದ್ಧತೆ ಮಾಡಿಕೊಂಡರೂ ಸಹ ಜೇಬಿನಿಂದ ಪಾನ್ ಪರಾಗ್ ತೆಗೆಯುವುದಕ್ಕೇ ಹೆದರಿಕೆ...... ಏನು ಆಗಿಬಿಡುವುದೋ ಅನ್ನೋ ಭಯ.... ಬಸ್ ನಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೆ .....??? ಪ್ಯಾಕ್ ಒಡೆಯುವುದಕ್ಕೆ ಕೊನೆಗೂ ಧೈರ್ಯವೇ ಬರಲಿಲ್ಲ..... ಹಾಗೇ ಆಲ್ದೂರು ದಾಟಿತು...... ಕೊನೆಗೆ ಒಂದು ತೀರ್ಮಾನಕ್ಕೆ ಬಂದ್ವಿ ಶೃಂಗೇರಿಗೆ ಹೋದ ಮೇಲೆ ತಿನ್ನೋಣ ಅಂತ...... ಆಮೇಲೆ ಮನಸ್ಸಿಗೆ ಒಂಥರಾ ಸಮಾಧಾನ ಆಯ್ತು..... ಹಾಗೇ ಬಸ್ ನಲ್ಲಿ ಮಲಗಿಕೊಂಡು ನಿದ್ರೆ ಮಾಡಿದ್ವಿ..... ಶೃಂಗೇರಿಗೆ ಬಂದು ಮನೆಗೆ ಹೋಗುತ್ತಿರುವಾಗ ಇನ್ನು ಈ ಪ್ಯಾಕ್ ಜೋಬಿನಲ್ಲಿ ಇದ್ದರೆ ಮನೆಯಲ್ಲಿ ನೋಡಿದರೆ ಬೈಸಿಕೊಳ್ಳಬೇಕು ಅಂತ ಅನ್ನಿಸ್ತು. ಹಾಗಾದ್ರೆ ಎಸೆದುಬಿಡೋಣಾ ಅಂತ ಮಾತಾಡಿಕೊಂಡು ಕೊನೆಗೂ.... ತಿನ್ನದೇ ಪಾನ್ ಪರಾಗ್ ಪ್ಯಾಕ್ ಅನ್ನು ಎಸೆದ್ವಿ...... ಎಸೆದ ಮೇಲೆ ಮನಸ್ಸಿಗೆ ಒಂಥರಾ ನೆಮ್ಮದಿ ಉಂಟಾಯಿತು....
ಊರಲ್ಲಿದ್ದರೆ ಕೆಲಸ ಇರಲಿ ಇಲ್ಲದಿರಲಿ ಸಂಜೆ ಒಂದು ರೌಂಡ್ ಪೇಟೆ ಕಡೆಗೆ ಹೋಗೋ ಹವ್ಯಾಸ ಮೊದಲಿಂದ ರೂಢಿಯಾಗಿತ್ತು... ಅದೇ ಪ್ರಕಾರ ನಾನು ನನ್ನತ್ತೆ ಮಗ ಪೇಟೆಗೆ ಹೋದ್ವಿ..... ಅಲ್ಲಿ ನಮ್ಮ ಸ್ನೇಹಿತನೊಡನೆ ನಮ್ಮ ಪಾನ್ ಪರಾಗ್ ಕಥೆಯನ್ನು ಹೇಳಿಕೊಂಡ್ವಿ..... ಅವನಿಗೆ “ತೀನ್ ಸೌ” ಹಾಗೂ “ಚಾರ್ ಸೌ ಬೀಸ್” ಎಲ್ಲಾ ತಿನ್ನುವ ಅಭ್ಯಾಸ ಇತ್ತು ..... ನಮ್ಮ ಕಥೆ ಕೇಳಿ ಬಿದ್ದು ಬಿದ್ದು ನಕ್ಕು...... ನೀವು ತೆಗೆದು ಕೊಂಡಿದ್ದು “ಪಾನ್ ಪರಾಗ್ ಪ್ಲೈನ್” ಅಲ್ವೇಂಡ್ರೋ ಅಂದ..... ಹುಂ ಅಂದ್ವಿ..... ಮಂಗಗಳಾ ಅದು ಬರೀ ಅಡಿಕೆ ಪುಡಿ ಕಣ್ರೋ..... ಅದರಲ್ಲಿ ಜರ್ದಾ ಗಿರ್ದಾ ಏನೂ ಇರಲ್ಲ ಬರೀ ಅಡಿಕೆ ಅಷ್ಟೇ ಅದನ್ನ ತಿಂದರೆ ಏನೂ ಅಗ್ತಾ ಇರಲಿಲ್ಲ.... ಅಂದ..... ನಮಗೆ ಆಗ ಒಂಥರಾ ಮರ್ಯಾದಿ ಹೋದ ಹಾಗೆ ಆಯಿತು..... ಬರೀ ಅಡಿಕೆ ಪುಡಿ ತಿನ್ನೋಕೆ ಇಷ್ಟು ಹೆದರಿಕೊಂಡ್ವಲ್ಲಾ ಅಂತ..... ನಮ್ಮತ್ತೆ ಮಗ ಮೊನ್ನೆ ಬಂದಾಗ ಈ ಘಟನೆ ನೆನಪಿಸಿಕೊಂಡು ನಗುತ್ತಾ ನೋಡೋ ಮೊದಲನೇ ಬಾರಿ ತಪ್ಪು ಮಾಡುವಾಗ ಎಷ್ಟು ಹೆದರಿಕೆ ಇರುತ್ತದೆ ..... ಕೊನೆಗೂ ನಮಗೆ ಪಾನ್ ಪರಾಗ್ ತಿನ್ನಲು ಆಗಲಿಲ್ಲವಲ್ಲ ಅಂದೆ.