Monday, May 30, 2011

ಮಾವಿನ ಹಣ್ಣಿನ ಸಾಸುವೆ......

     ಇತ್ತೀಚೆಗೆ ಮನೆಯಲ್ಲಿ ಸ್ವಯಂಪಾಕ ಮಾಡುವುದು ಜಾಸ್ತಿ ಆಗಿಬಿಟ್ಟಿದೆ......    ಸಾಧಾರಣವಾಗಿ ಎಲ್ಲ ಅಡಿಗೆಯನ್ನೂ ಮಾಡಲು ಕಲಿತುಬಿಟ್ಟಿದ್ದೇನೆ.  ಮೊನ್ನೆ  ಮನೆಯಲ್ಲಿ ಯಾರೂ ಇರಲಿಲ್ಲ ನಾನೇ ಅಡಿಗೆ ಮಾಡಬೇಕಾಯಿತು ಏನು ಮಾಡಲಿ ಎಂದು ಯೋಚಿಸುತ್ತಿರುವಾಗ ಪಕ್ಕದ ಮನೆ ಹುಡುಗ ತಂದು ಕೊಟ್ಟ ಮಾವಿನ ಹಣ್ಣು (ಕಾಡುಮಾವು) ಕಣ್ಣಿಗೆ ಬಿತ್ತು. (ಮಾವಿನ ಹಣ್ಣಿನ ಕಾಲವಾದ್ದರಿಂದ ಹೇರಳವಾಗಿ ಸಿಕ್ಕುತ್ತದೆ.)  ಸರಿ ಸಾಸುವೆ ಮಾಡೋಣ ಅಂತ ತೀರ್ಮಾನ ಮಾಡಿಕೊಂಡೆ.  ಅತಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಅತ್ಯಂತ ರುಚಿಯಾದ ಅಡಿಗೆ ಅದು.  ಮಾಡುವ ಕ್ರಮವನ್ನು ಬರೆಯಬೇಕೆನೆಸಿ ಇಲ್ಲಿ ಬರೆಯುತ್ತಿದ್ದೇನೆ.... ನಿಮಗೆ ಎಂದಾದರೂ ಉಪಯೋಗಕ್ಕೆ ಬರಬಹುದು...  :)

     ಮೊದಲು ಮಾವಿನ ಹಣ್ಣುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ನಂತರ ಹಣ್ಣಿನ ಸಿಪ್ಪೆಯನ್ನು ತೆಗೆದು ಒಂದುಪಾತ್ರೆಯಲ್ಲಿ ಗೊರಟು(ವಾಟೆ) ಗಳನ್ನು ಹಾಕಬೇಕು ಸಿಪ್ಪೆಯಲ್ಲಿ ಹಣ್ಣಿನ ಅಂಶಗಳಿದ್ದರೆ ಚೆನ್ನಾಗಿ ಪಾತ್ರೆಗೆ ಹಿಂಡಬೇಕು.  ಕಾಡು ಮಾವಿನ ಹಣ್ಣಾದರೆ  ಹತ್ತು ಹನ್ನೆರಡು ಹಣ್ಣನ್ನು ಹಾಕಿದರೆ ಒಂದು ಹೊತ್ತಿಗೆ ಇಬ್ಬರಿಗೆ ಸಾಕಾಗುವಷ್ಟು ಸಾಸುವೆ ಮಾಡಬಹುದು.  ಹಣ್ಣುಗಳನ್ನು ಬಿಡಿಸಿದ ನಂತರ ಹಣ್ಣುಗಳನ್ನು ಹಾಕಿದ ಪಾತ್ರೆಗೆ ಬೆಲ್ಲವನ್ನು ಚೆನ್ನಾಗಿ ಕುಟ್ಟಿ ಹಾಕಬೇಕು ಪ್ರಮಾಣಕ್ಕೆ ತಕ್ಕಷ್ಟು ಉಪ್ಪನ್ನು ಹಾಕಿ ಬೆಲ್ಲಕರಗುವ ವರೆಗೆ  ಗೊರಟುಗಳನ್ನು ಹಾಗೂ ಬೆಲ್ಲವನ್ನು ಚೆನ್ನಾಗಿ ಕಯ್ಯಲ್ಲಿ ಕಿವುಚಬೇಕು (ಕಿವುಚುವುದರಿಂದ ಹಣ್ಣಿನ ರಸವು ಚೆನ್ನಾಗಿ ಬಿಟ್ಟು ಉಪ್ಪು ಬೆಲ್ಲದೊಡನೆ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ).  ನಂತರ ಎಂಟು ಹತ್ತು ಹಸಿ ಮೆಣಸಿನ ಕಾಯನ್ನು ಚೆನ್ನಾಗಿ ಎಣ್ಣೆಯಲ್ಲಿ ಹುರಿದುಕೊಂಡು ಸ್ವಲ್ಪ ಕಾಯಿತುರಿಯ ಜೊತೆಗೆ ನುಣ್ಣಗೆ ಮಿಕ್ಸಿ ಮಾಡಿ ಹಣ್ಣಿನ ಪಾತ್ರೆಗೆ ಬೆರೆಸಿ, ಸಾಸಿವೆ ಜೀರಿಗೆ ಒಣಮೆಣಸಿನ ಒಗ್ಗರಣೆಯನ್ನು ಹಾಕಿದರೆ "ಮಾವಿನ ಹಣ್ಣಿನ ಸಾಸುವೆ" ರೆಡಿಯಾಗುತ್ತದೆ...... ಕಾಡು ಮಾವಿನ ಹಣ್ಣು ಸ್ವಲ್ಪ ಹುಳಿಯಾಗಿರುವುದರಿಂದ ಹುಣಸೆಹಣ್ಣು ಅಥವ ನಿಂಬೆಹಣ್ಣನ್ನು ಹಾಕುವ ಅಗತ್ಯವಿರುವುದಿಲ್ಲ.  ನಗರ ಪ್ರದೇಶಗಳಲ್ಲಿ ಕಾಡುಮಾವಿನ ಹಣ್ಣು ಸ್ವಲ್ಪ ಅಭಾವವಿದ್ದು ಕಸಿ ಮಾವಿನ ಹಣ್ಣು ಹೇರಳವಾಗಿ ದೊರೆಯುತ್ತದೆ.  ಕಸಿ ಮಾವಿನ ಹಣ್ಣಿನಲ್ಲಿ ಹುಳಿಯ ಪ್ರಮಾಣವಿಲ್ಲದೇ ಸಿಹಿ ಜಾಸ್ತಿ ಇರುವುದರಿಂದ ಕಸಿ ಮಾವಿನ ಹಣ್ಣಿನ ಸಾಸುವೆ ಮಾಡುವುದಾದರೆ ಬೆಲ್ಲವನ್ನು ಸ್ವಲ್ಪ ಕಮ್ಮಿ ಹಾಕಿ ಸ್ವಲ್ಪ ಹುಳಿಮಜ್ಜಿಗೆ ಹಾಕಿದರೆ ಆಯ್ತು ರುಚಿ ರುಚಿಯಾದ ಸಾಸುವೆ ಸಿದ್ಧವಾಗುತ್ತದೆ......

     ಮಾಡಿ ನೋಡಿ ರುಚಿ ಹೇಗಿತ್ತೆಂದು ತಿಳಿಸುವಿರಿ ತಾನೆ........  ????????

2 comments:

  1. ನಂಗಿಷ್ಟ ಇದು... ಈ ಸಲ ಊರಿಗೆ ಹೋದಾಗ ೪-೫ ತಂದಿದೀನಿ ಕಾಡು ಮಾವು.. ನಾನು ಹಸಿ ಮೆಣ್ಸ್ ಬದ್ಲು ಚೂರಿ ಮೆಣ್ಸ್ ಹಾಕ್ತೀನಿ.. ಅರೆದಲ್ಲ, ನುರಿದು (ಕೈಯೆಲ್ಲಾ ಭಗ ಭಗ :)).. ಕಾಯಿ ಹಾಕುದಿಲ್ಲ.. ಮತ್ತೆಲ್ಲಾ ಸೇಮ್ :) ಸೇರ್ ಗಟ್ಲೆ ಊಟ ಮಾಡಬಹುದು..

    ನನ್ನಮ್ಮ ಇದನ್ನ ಕುದ್ಸಿ ಇಡ್ತಾರೆ (ದಿಂಡಿನ್ ಕಾಯ್ ಅಲ್ಲ).. ತುಂಬಾ ದಿನದವರೆಗೆ ಬರುತ್ತೆ..

    ReplyDelete
  2. ಹೌದು ಫಾಲ ಅವರೆ... ಹಲಸಿನ ಕಾಯಿ ಅನ್ನ ಉಳಿಸುತ್ತೆ ಮಾವಿನ ಕಾಯಿ ಅನ್ನ ಖರ್ಚು ಮಾಡಿಸುತ್ತೆ... ನಾವು ಜೀರೀ (ಚೂರಿ) ಮೆಣಸು ಅನ್ನುತ್ತೇವೆ. ಹೌದು ಉಪ್ಪು ಬೆಲ್ಲ ಹಾಕಿ ಕುದಿಸಿ ಇಟ್ಟುಕೊಂಡರೆ ನಮಗೆ ಬೇಕಾದಾಗ ಅಡಿಗೆ ಮಾಡಿಕೊಳ್ಳಬಹುದು... ಜೊತೆಗೆ ಒಣಗಿದ ಜೀರಿ ಮೆಣಸನ್ನು ಪುಡಿ ಮಾಡಿ ಹಾಕಿದರೆ ಹಾಗೇ ಕಲಸಿಕೊಂಡು ತಿನ್ನಬಹುದು... :)

    ReplyDelete